ನಿಗಧಿತ ಕಾಲಮಿತಿಯೊಳಗೆ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಿ: ಡಿಸಿ ವೈ.ಎಸ್.ಪಾಟೀಲ

131

Get real time updates directly on you device, subscribe now.

ತುಮಕೂರು: ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸ್ಮಾರ್ಟ್ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಯಾವುದೇ ವಿಳಂಬ ಮಾಡದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಯಾ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಬೆಳಗುಂಬ ರಸ್ತೆ (ತಮ್ಮಯ್ಯ ಆಸ್ಪತ್ರೆಯಿಂದ ಕೋತಿತೋಪು ರಸ್ತೆ ಕಡೆ)ಯನ್ನು ಅಗಲೀಕರಣ ಮಾಡಿ ಈಗಾಗಲೇ ಮಾರ್ಕ್ ಮಾಡಿರುವ ಒತ್ತುವರಿ ಕಟ್ಟಡಗಳನ್ನು ನಿಯಮಾನುಸಾರ ಪರಿಶೀಲಿಸಿ ಪಾಲಿಕೆ ವತಿಯಿಂದ ಅಗತ್ಯ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಿ, ರಸ್ತೆಯನ್ನು ಅಭಿವೃಧ್ಧಿಗೊಳಿಸಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಕೋರ್ಟ್ ತಡೆಯಾಜ್ಞೆ ನೀಡಿರುವ ಕಟ್ಟಡಗಳನ್ನು ಹೊರತುಪಡಿಸಿ ಉಳಿದ ಕಟ್ಟಡಗಳನ್ನು ನಿಯಮಾನುಸಾರ ತೆರವುಗೊಳಿಸಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ನಗರದ ಚಾಮುಂಡೇಶ್ವರಿ ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಬೇಕು. ಜೆ.ಸಿ ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪದಿಂದ ಮಂಡಿಪೇಟೆ ಮುಖ್ಯ ರಸ್ತೆಯ ಕಡೆ ಹೊಸ ಯುಜಿಡಿ ಪೈಪ್ಲೈನ್ ಕಾಮಗಾರಿ ಸೇರಿದಂತೆ ಉಳಿದ ಇನ್ನಿತರ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಜೂನ್ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಇಂಜಿನಿಯರ್ ಬಸವರಾಜೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!