ಕುಣಿಗಲ್: ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದ ಮೆಡಿಕಲ್ ಸ್ಟೋರ್ ನಲ್ಲಿ ಅಕ್ರಮವಾಗಿ ಮಾದಕ ವಸ್ತು ವರ್ಗಕ್ಕೆ ಸೆರಿದ ಮಾತ್ರೆ ಮಾರಾಟ ಮಾಡುತ್ತಿರುವ ಬಗ್ಗೆ ವೀಡಿಯೋ ಹರಿದಾಡಿದ್ದರಿಂದ ಎಚ್ಚೆತ್ತ ತಾಲೂಕು ಆರೋಗ್ಯಾಧಿಕಾರಿ, ಔಷಧ ನಿಯಂತ್ರಕ ಸಿಬ್ಬಂದಿ ಗುರುವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಚಿತ್ರ ನಟ ದುನಿಯಾ ವಿಜಯ್, ಮಾದಕ ವಸ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಮುಂಭಾಗದ ಹಾಗೂ ಸಂತೇ ಮಾವತ್ತೂರಿನ ಮೆಡಿಕಲ್ ಸ್ಟೋರ್ ನಲ್ಲಿ ಮಾದಕ ವಸ್ತು ವರ್ಗಕ್ಕೆ ಸೇರಿದ ಮಾತ್ರೆಗಳನ್ನು ಖರೀದಿ ಮಾಡಿ ಇದಕ್ಕೆ ಸಂಬಂಧಿಸಿದಂತೆ ವೀಡಿಯೋವನ್ನು ಬುಧವಾರಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು, ಪಟ್ಟಣದ ಕೆಲ ಮೆಡಿಕಲ್ ಸ್ಟೋರ್ ಗಳಲ್ಲಿ ಅಕ್ರಮವಾಗಿ ಮಾದಕ ವಸ್ತು ವರ್ಗಕ್ಕೆ ಸೇರಿದ ಮಾತ್ರೆಗಳನ್ನು ಯುವ ಜನತೆಗೆ ಮಾರಾಟ ಮಾಡುತ್ತಿದ್ದಾರೆಂದು ಹಲವು ನಾಗರಿಕರು, ಪುರಸಭೆ ಮಾಜಿ ಸದಸ್ಯರು ಔಷಧ ನಿಯಂತ್ರಕರಿಗೆ ದೂರು ನೀಡಿದ್ದರೂ ಇಲಾಖೆ ಯಾವುದೆ ಕ್ರಮ ಕೈಗೊಂಡಿರಲಿಲ್ಲ, ಬುಧವಾರ ರಹಸ್ಯಕಾರ್ಯಾಚರಣೆ ವೀಡಿಯೋ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ನಾಗೂರು, ಸಹಾಯಕ ಔಷಧ ನಿಯಂತ್ರಕಿ ನಿಲೀಮಾ ಗುರುವಾರ ಬೆಳಗ್ಗೆ ಪ್ರಥಮ ದರ್ಜೆ ಕಾಲೇಜು ಮುಂಭಾದ ವೆಂಕಟೇಶ್ವರ ಮೆಡಿಕಲ್ ಅಂಡ್ ಜನರಲ್ ಸ್ಟೋರ್ ಮೇಲೆ ದಾಳಿಗೆ ಅಗಮಿಸಿದಾಗ ಮಾಲೀಕರು ಬೀಗ ಹಾಕಿದ್ದರು, ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸಿಪಿಐ ನವೀನ್ ಗೌಡ, ಮಳಿಗೆ ಸನ್ನದ್ದುದಾರರನ್ನು ಕರೆ ತಂದರು.
ಔಷಧ ನಿಯಂತ್ರಣ ಇಲಾಖೆಯವರನ್ನು ತರಾಟೆಗೆ ತೆಗೆದುಕೊಂಡ ನಾಗರಿಕರು ನಿಮ್ಮ ಮಕ್ಕಳಿಗೆ ಇದೆ ರೀತಿ ಡ್ರಗ್ ಕೊಡ್ತೀರಾ, ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ, ನಿಮ್ಮ ನಿರ್ಲಕ್ಷ್ಯದಿಂದ ಸಾಕಷ್ಟು ಯುವ ಜನತೆ ಆರೋಗ್ಯ ಹಾಳು ಮಾಡಿ ಕೊಳ್ಳುತ್ತಿದ್ದಾರೆ, ಎಲ್ಲೆಂದರಲ್ಲಿ ಮಾದಕವಸ್ತು ವರ್ಗದ ಮಾತ್ರೆಗಳು ಯಾವ ವೈದ್ಯರ ಸಲಹೆ ಚೀಟಿ ಇಲ್ಲದೆ ಸಿಗುತ್ತಿವೆ, ಜನರೆ ಕಾನೂನು ಕೈಗೆತ್ತಿಕೊಳ್ಳೊ ಮುನ್ನ ಮಾದಕ ಮಾತ್ರೆ ಮಾರಾಟ ನಿಯಂತ್ರಿಸಿ ಎಂದರು.
ಸುಮಾರು ಮೂರು ಗಂಟೆಗಳ ಮೆಡಿಕಲ್ ಸ್ಟೋರ್ ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಮೆಡಿಕಲ್ ಸ್ಟೋರ್ ನವರು ಮಾದಕ ವಸ್ತು ವರ್ಗಕ್ಕೆ ಸೇರಿದ ವಿವಿಧ ಮಾತ್ರೆಗಳನ್ನು ತರಿಸಿದ್ದಕ್ಕೆ ಸಂಬಂಧಿಸಿದ ದಾಖಲೆಗಳು, ಬಿಲ್ ಗಳು ಸಿಕ್ಕಿದ್ದು ವಶಕ್ಕೆ ಪಡೆದರು, ಇದರ ಜೊತೆ ಕೆಲ ಮಾತ್ರೆಗಳು ಸಹ ಲಭ್ಯವಾದವು.
ಘಟನೆ ಬಗ್ಗೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ, ಕುಣಿಗಲ್, ಸಂತೆ ಮಾವತ್ತೂರು ಎರಡು ಮೆಡಿಕಲ್ ಸ್ಟೋರ್ ಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದು, ವೈದ್ಯರ ಸಲಹೆ ಇಲ್ಲದೆ ಈ ಮಾತ್ರೆಗಳು ನೀಡುವಂತಿಲ್ಲ, ಮೆಡಿಕಲ್ ಸ್ಟೋರ್ ನವರು ಸಾಕಷ್ಟು ಸರಕು ಖರೀದಿಸಿ ಮಾರಾಟ ಮಾಡಿದ್ದು ದಾಖಲೆ ಇಟ್ಟಿಲ್ಲ, ಇದು ಎನ್ ಡಿ ಪಿ ಎಸ್ ಕಾಯಿದೆಗೆ ಬರಲಿದ್ದು ಈ ಬಗ್ಗೆ ಔಷಧ ನಿಯಂತ್ರಕರು ಅಗತ್ಯ ಕ್ರಮ ಕೈಗೊಳ್ಳಲಿದ್ದು, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
Comments are closed.