ರಾಜ್ಯದಲ್ಲಿ ಪಂಚ ಗ್ಯಾರಂಟಿ ಯಶಸ್ವಿ

ಗ್ಯಾರಂಟಿ ಯೋಜನೆಯನ್ನು ಸ್ಥಗಿತ ಮಾಡುವುದಿಲ್ಲ: ಪರಂ

17

Get real time updates directly on you device, subscribe now.


ತುಮಕೂರು: ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ವಿಪಕ್ಷಗಳು ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡು ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ತಿರುಳಿಲ್ಲದ ಆಪಾದನೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿಂದು 78ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಸರ್ಕಾರ ಕಾನೂನು ಚೌಕಟ್ಟಿನಲ್ಲಿಯೇ ಆಡಳಿತ ನಡೆಸುತ್ತಿದೆ, ಯಾವುದೇ ಟೀಕೆ- ಟಿಪ್ಪಣಿಗಳಿಗೂ ನಾವು ಹೆದರುವುದಿಲ್ಲ, ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಮೂಲ ಮಂತ್ರವೆಂದು ತಿಳಿಸಿದರು.
ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸುವ ಮೂಲಕ ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಡತನ ನಿರ್ಮೂಲನೆಗಾಗಿ ಪಂಚ ಗ್ಯಾರಂಟಿಗಳ ಮೂಲಕ ಫಲಾನುಭವಿಗಳಿಗೆ ಒಂದೂವರೆ ವರ್ಷದಿಂದ ಸಾವಿರಾರು ಕೋಟಿ ರೂ. ವೆಚ್ಚ ಮಾಡಲಾಗಿದೆ, ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿ ಯೋಜನೆಯನ್ನು ಸ್ಥಗಿತ ಮಾಡುವುದಿಲ್ಲವೆಂದು ತಿಳಿಸಿದರು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಗ್ಯಾರಂಟಿ ಯೋಜನೆಗಳಿಗೆ ಯಾವ ನಿಯಮವನ್ನೂ ಹೊಸದಾಗಿ ಸೇರಿಸುವುದಿಲ್ಲವೆಂದು ಸ್ಪಷ್ಟನೆ ನೀಡಿದರು, ಜಿಲ್ಲೆಯ ಪಡಿತರ ಚೀಟಿಗಳ ಪರಿಷ್ಕರಣೆ ನಡೆಸಲಾಗುತ್ತಿದ್ದು, ಈ ಪರಿಷ್ಕರಣೆಯಲ್ಲಿ 4 ಚಕ್ರದ ವಾಹನ ಹೊಂದಿರುವ, ಸರ್ಕಾರಿ ನೌಕರಿ ಹೊಂದಿರುವ, ಆದಾಯ ತೆರಿಗೆ ಪಾವತಿಸುವ, 3 ಹೆಕ್ಟೇರ್ ಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಿ ಪರಿಗಣಿಸಬಾರದು, ನಿಯಮ ಬಾಹಿರವಾಗಿ ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಯಾವುದೇ ಮುಂಬಡ್ತಿ ಪ್ರಕರಣ ಬಾಕಿಯಿರುವುದಿಲ್ಲ, ಪ್ರತಿ ಜಿಲ್ಲೆಯಲ್ಲಿಯೂ ಹೊಸದಾಗಿ 1 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಹುದ್ದೆ ಸೃಜಿಸಲಾಗಿದ್ದು, ಒಟ್ಟು 30 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ, ಹೊಸದಾಗಿ ನೇಮಕ ಮಾಡಿಕೊಂಡಿರುವ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಆದೇಶವನ್ನು ಆಗಸ್ಟ್ ಮಾಹೆಯ ಅಂತ್ಯದೊಳಗಾಗಿ ನೀಡಲಾಗುವುದು, ಅಲ್ಲದೆ 600 ಹೊಸ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಹಾಗೂ 403 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ ಎಂದರಲ್ಲದೆ ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ನೇಮಕಾತಿ ಮಾಡದೇ ಬಾಕಿ ಉಳಿದಿದ್ದ 20,000 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!