ಕುಣಿಗಲ್ ನಲ್ಲಿ ಮತ್ತಿನ ಮಾತ್ರೆ ಮಾಯಾಜಾಲ

ಮತ್ತಿನ ಮಾತ್ರೆಗೆ ಆಕರ್ಷಿತರಾಗುತ್ತಿರುವ ಯುವ ಜನತೆ

27

Get real time updates directly on you device, subscribe now.


-ಆನಂದ ಸಿಂಗ್.ಟಿ.ಹೆಚ್.
ಕುಣಿಗಲ್: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತ್ತು ಬರಿಸುವ ಔಷಧ ಮಾರಾಟ ಜಾಲದ ಹಾವಳಿ ಹೆಚ್ಚಿದ್ದು, ಜಾಲ ನಿಯಂತ್ರಿಸಿ ಯುವ ಜನತೆ ಮತ್ತಿನ ಮಾತ್ರೆಗೆ ಬಲಿಯಾಗದಂತೆ ಕ್ರಮ ವಹಿಸುವಂತೆ ಮುಖಂಡರು ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸಿದ್ದಾರೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಮತ್ತುಬರಿಸುವ ಔಷಧ ಸೇವಿಸುವ ಯುವ ಜನತೆ ಕ್ರಮೇಣ ಹೆಚ್ಚಾಗುತ್ತಿದ್ದು ಮನೆಯಲ್ಲಿರುವ ಪೋಷಕರಿಗೆ ಇದರ ಅರಿವೆ ಇಲ್ಲದಂತಾಗಿದೆ, ಕೆಲ ದಿನಗಳ ನಂತರ ಮನೆಯಲ್ಲಿ ಯುವಕರು ನಿತ್ರಾಣರಾದಾಗಲೆ ಮತ್ತು ಬರಿಸುವ ಔಷಧಿಗೆ ಒಳಗಾಗಿರುವುದು ಕಂಡುಬರುತ್ತಿದೆ, ಸಾಮಾನ್ಯವಾಗಿ ಮದ್ಯಪಾನ ಮಾಡಿದಾಗ ವಾಸನೆ ಬಂದು ಗೊತ್ತಾಗುವುದರಿಂದ ಮತ್ತು ಬರಿಸುವ ಔಷಧಿ ಜಾಲಕ್ಕೆ ಯುವಕರು ಒಳಗಾಗುತ್ತಿದ್ದಾರೆ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಹೆಚ್ಚಾಗಿ ಔಷಧ ಮಾರಾಟ ಮಳಿಗೆಗಳು ಹೆಚ್ಚಿರುವುದರಿಂದ ವ್ಯಾಪಾರದಲ್ಲಿ ಪೈಪೋಟಿ ಇರುವ ಕಾರಣ ಕೆಲ ಮಳಿಗೆಯವರು ಮತ್ತು ಬರಿಸುವ ಔಷಧ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಚಿತ್ರನಟನೊಬ್ಬ ಮತ್ತಿನೌಷಧ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಔಷಧ ಅಂಗಡಿಯಲ್ಲಿ ಖರೀದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಮೇರೆಗೆ ಔಷಧ ನಿಯಂತ್ರಣ ಇಲಾಖಾಧಿಕಾರಿಗಳು, ಆರೋಗ್ಯ ಇಲಾಖಾಧಿಕಾರಿಗಳು ದಾಳಿ ಮಾಡಿ ಹೋಗಿದ್ದು ಇನ್ನು ಯಾವುದೇ ಕ್ರಮವಾಗಿಲ್ಲ.
ಸಾಮಾನ್ಯವಾಗಿ ಮತ್ತು ಬರಿಸುವ ಔಷಧಗಳು ಶೆಡ್ಯೂಲ್ ಹೆಚ್, ಹೆಚ್-1 ಡ್ರಗ್ ವಿಭಾಗಕ್ಕೆ ಬರುತ್ತಿದ್ದು ಇವುಗಳ ವಿತರಣೆಗೆ ತಜ್ಞ ವೈದ್ಯರ ಸಲಹೆ ಚೀಟಿ ಕಡ್ಡಾಯ, ಸಲಹೆ ಚೀಟಿ ಇಲ್ಲದೆ ಇದ್ದರೆ ನೀಡುವಂತಿಲ್ಲ, ಆದರೆ ಕೆಲ ಔಷಧ ಮಾರಾಟಗಾರರು ಮತ್ತು ಬರಿಸುವ ಹತ್ತು ಮಾತ್ರೆ ಚೀಟಿ 35- 40 ರೂ. ಇದ್ದರೆ ಹತ್ತು ಪಟ್ಟು ಹೆಚ್ಚಿಗೆ ಪಡೆದು ನೀಡುತ್ತಾರೆ, ಕೆಲ ಮತ್ತು ಬರಿಸುವ ಔಷಧ ಮಾತ್ರೆಗಳು ದೀರ್ಘ ಕಾಲದ ಕಿಕ್ ಕೊಡಲು ಮಾತ್ರೆಗಳನ್ನು ನೀರಿನ ಬಾಟಲಿ ಮುಚ್ಚಳಗಳಿಗೆ ಸ್ವಲ್ಪ ನೀರು ಹಾಕಿ, ಮಧು ಮೇಹಿ ರೋಗಿಗಳು ಇನ್ಸುಲಿನ್ ಬಳಕೆಗೆ ಬಳಸುವ ಸಿರಂಜ್ಮೂಲಕ ನೇರವಾಗಿ ರಕ್ತನಾಳಗಳಿಗೆ ಚುಚ್ಚಿಕೊಳ್ಳುವ ಮೂಲಕ ಮತ್ತೇರಿಸಿ ಕೊಳ್ಳುತ್ತಿದ್ದಾರೆ, ಪಟ್ಟಣದ ಕೋಟೆ ಪ್ರದೇಶದ ಕೆಲ ಭಾಗ, ಗುಜ್ಜಾರಿ ಮೊಹಲ್ಲ ಅಕ್ಕಪಕ್ಕದ ಬಡಾವಣೆ, 18ನೇ ವಾರ್ಡ್ನ ವಿವಿಧೆಡೆ, ಚಿಕ್ಕಕೆರೆ ಏರಿ ಸಮೀಪ, ದೊಡ್ಡಕೆರೆ ಏರಿಯ ಮೇಲೆ, ರೈಲ್ವೆ ಸ್ಟೇಷನ್ ಸಮೀಪದ ನಿರ್ಜನ ಪ್ರದೇಶದಲ್ಲಿ ಮತ್ತೇರಿಸಿಕೊಳ್ಳುವ ತಾಣಗಳಲ್ಲಿ ಯುವ ಜನತೆ ಕಾಣ ಬರುತ್ತಿದ್ದಾರೆ, ಕೆಲ ಔಷಧಿಗಳು ಎನ್ ಡಿಪಿಎಸ್ ಕಾಯಿದೆಯಡಿಯಲ್ಲಿ ಬರುವುದರಿಂದ ಅಬಕಾರಿ, ಪೊಲೀಸ್ ಇಲಾಖೆ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ.

ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಮಾಸಿಕ ಭೇಟಿ ನೀಡಿದರೂ ಮತ್ತಿನ ಔಷಧ ಮಾರಾಟಕ್ಕೆ ಕಡಿವಾಣ ಇಲ್ಲದೆ ಇರುವುದು ಇಲಾಖೆಯ ಕಾರ್ಯ ವೈಖರಿಯನ್ನೆ ಪ್ರಶ್ನಿಸುವಂತಾಗಿದೆ, ಮತ್ತಿನ ಮಾತ್ರೆಗಳನ್ನು ಔಷಧ ವಿತರಕರ ಬಳಿ ಕೆಲಸ ಮಾಡಿರುವ ಕೆಲವರು ಅಕ್ರಮವಾಗಿ ಬೆಂಗಳುರು, ರಾಜಸ್ಥಾನ ವಿವಿಧೆಡೆಗಳಿಂದ ಅಕ್ರಮವಾಗಿ ತಂದು ಜಾಲಗಳಿಗೆ ಪೂರೈಕೆ ಮಾಡುತ್ತಿವೆಂಬ ಆರೋಪಗಳು ಕೇಳಿ ಬರುತ್ತಿವೆ.

Get real time updates directly on you device, subscribe now.

Comments are closed.

error: Content is protected !!