ತುಮಕೂರು ದಸರಾ ಉತ್ಸವಕ್ಕೆ ಸಿದ್ಧತೆ ಕೈಗೊಳ್ಳಿ

27

Get real time updates directly on you device, subscribe now.


ತುಮಕೂರು: ಮ್ಯೆಸೂರು ದಸರಾ ಉತ್ಸವದ ಮಾದರಿಯಲ್ಲಿ ಈ ಬಾರಿ ಸಾಂಪ್ರದಾಯಿಕವಾಗಿ ಹಾಗೂ ಅದ್ದೂರಿಯಾಗಿ ತುಮಕೂರು ದಸರಾ ಉತ್ಸವ ಆಚರಿಸಲು ಉದ್ದೇಶಿಸಲಾಗಿದ್ದು, ದಸರಾ ಉತ್ಸವದ ಯಶಸ್ವಿಗೆ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ತುಮಕೂರು ದಸರಾ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಮೊದಲ ಬಾರಿಗೆ ತುಮಕೂರು ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 10 ರಿಂದ 12ರ ವರೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ, ಈ ಬಾರಿ ನವೀನ ರೀತಿಯ ಕಾರ್ಯಕ್ರಮ ರೂಪಿಸುವ ಮೂಲಕ ದಸರಾಗೆ ಮೆರುಗು ತರಬೇಕು, ಶಿಷ್ಟಾಚಾರದಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು, ದಸರಾ ಆಚರಣೆಗೆ ಹೆಚ್ಚಿನ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಿ ದಸರಾ ಮಹೋತ್ಸವ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯ ದಶಮಿ ದಿನದಂದು ನಗರದ ಟೌನ್ ಹಾಲ್ ವೃತ್ತದಿಂದ ಜೂನಿಯರ್ ಕಾಲೇಜು ಮೈದಾನದ ವರೆಗೂ ದಸರಾ ಮೆರವಣಿಗೆ ಆಯೋಜಿಸಬೇಕು, ಮೆರವಣಿಗೆಯಲ್ಲಿ ಅಲಂಕೃತ ಆನೆಗಳನ್ನು ಬಳಸಿಕೊಳ್ಳಬೇಕು, ದಸರೆಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಆನೆಗಳ ಪಟ್ಟಿ ಸಿದ್ಧಪಡಿಸಿಸಬೇಕೆಂದು ಮುಜರಾಯಿ ಹಾಗೂ ಅರಣ್ಯ ಇಲಾಖೆಗೆ ಸೂಚಿಸಿದರಲ್ಲದೆ, ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಏರ್ಪಡಿಸಲು ನಿರ್ದೇಶಿಸಿದರು.
ದಸರಾ ಉತ್ಸವದ ಪ್ರಯುಕ್ತ ಅಕ್ಟೋಬರ್ 10 ರಿಂದ 12ರ ವರೆಗೆ ಪ್ರತಿದಿನ ಸಂಜೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು, ಉತ್ಸವದಲ್ಲಿ ರೈತ ದಸರಾ, ಯುವ ದಸರಾ, ಚಿಣ್ಣರ ದಸರಾ, ಮಹಿಳಾ ದಸರಾ, ಯೋಗ ದಸರಾ, ದಸರಾ ಕುಸ್ತಿ, ಯುವ ಸಂಭ್ರಮ, ಮತ್ಸ್ಯ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದರು.

ಉತ್ಸವದ ಅಂಗವಾಗಿ ನಗರದ ಬಟವಾಡಿಯಿಂದ ಗುಬ್ಬಿಗೇಟ್ ವರೆಗೆ, ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಾಗೂ ನಗರದ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ, ಜೂನಿಯರ್ ಕಾಲೇಜು ಮೈದಾನದಲ್ಲಿ ಸುಸಜ್ಜಿತ ವೇದಿಕೆ ನಿರ್ಮಾಣ, ಕಾಲೇಜು ಆವರಣದಲ್ಲಿ ವಸ್ತು ಪ್ರದರ್ಶನ ಮಳಿಗೆ ನಿರ್ಮಾಣ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.
ದಸರಾ ಕ್ರೀಡಾಕೂಟದಲ್ಲಿ ದೇಶಿಯ ಕ್ರೀಡೆಗಳಾದ ಕಬ್ಬಡಿ, ಖೋಖೋ ಕ್ರೀಡೆಗಳಿಗೆ ಆದ್ಯತೆ ನೀಡಬೇಕು, ಗ್ರಾಮೀಣ ಯುವ ಸಮೂಹ ಆಕರ್ಷಿಸುವ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಚಲಿತವಿರುವ ಕಲೆ, ಕಲಾವಿದರು, ಕಲಾ ತಂಡಗಳನ್ನು ಗುರುತಿಸಿ ಅವರಿಂದ ಸಾಂಸ್ಕೃತಿಕ ಪ್ರದರ್ಶನ ವ್ಯವಸ್ಥೆಗೊಳಿಸಲು ಸೂಚಿಸಿದ ಅವರು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ ಅವರಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ದಸರಾ ಆಚರಣೆ ಸಂಬಂಧ ಅಗತ್ಯ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಜಿಪಂ ಯೋಜನಾಧಿಕಾರಿ ನಾರಾಯಣ ಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಾಲಗುರುಮೂರ್ತಿ, ಡಿಡಿಪಿಐ ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!