ಅವಧಿ ಮೀರಿದ ವೈದ್ಯಕೀಯ ಮಾತ್ರೆ, ಸಿರಪ್

ಕುಣಿಗಲ್ ನಲ್ಲಿ ಲೋಡ್ ಗಟ್ಟಲೆ ಸುರಿದಿರುವ ಅಪರಿಚಿತರು

15

Get real time updates directly on you device, subscribe now.


ಕುಣಿಗಲ್: ಪಟ್ಟಣದ 22ನೇ ವಾರ್ಡ್ನ ಜನವಸತಿ ಪ್ರದೇಶದಲ್ಲಿ ಲೋಡ್ ಗಟ್ಟಲೆ ಅವಧಿ ಮೀರಿದ ವೈದ್ಯಕೀಯ ಮಾತ್ರೆ, ಸಿರಪ್, ಮುಲಾಮಿನ ಟ್ಯೂಬ್ ಗಳನ್ನು ಅಪರಿಚಿತರು ತಡರಾತ್ರಿ ಸುರಿದು ಹೋಗಿದ್ದು ಕ್ರಮಕ್ಕೆ ನಾಗರಿಕರು ಆಗ್ರಹಿಸಿದ ಘಟನೆ ನಡೆದಿದೆ.
ಪಟ್ಟಣದ 22ನೇ ವಾರ್ಡ್ನ ರೈಲ್ವೆ ಸ್ಟೇಷನ್ ಸಮೀಪದ ಅಂಡರ್ ಪಾಸ್ ಬಳಿ ಬುಧವಾರ ರಾತ್ರಿ ಅವಧಿ ಮೀರಿದ ವೈದ್ಯಕೀಯ ಮಾತ್ರೆ, ಸಿರಪ್ ಬಾಟಲಿ, ಅಯಿಂಟ್ ಮೆಂಟ್ ಟ್ಯೂಬ್ ಗಳನ್ನು ದುಷ್ಕರ್ಮಿಗಳು ರಸ್ತೆಯ ಎರಡು ಕಡೆ ಸುರಿದು ಹೋಗಿದ್ದಾರೆ. ಗುರುವಾರ ಬೆಳಗ್ಗೆ ಕಂಡ ನಾಗರಿಕರು ಈಬಗ್ಗೆ ಆತಂಕಗೊಂಡು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸದರಿ ಅಧಿಕಾರಿ ತಾವು ತರಬೇತಿಗೆ ಮೈಸೂರಿನಲ್ಲಿದ್ದು ಪ್ರಭಾರ ಅಧಿಕಾರಿ ಸಾರ್ವಜನಿಕ ಆಸ್ಪತ್ರೆಯ ಅಡಳಿತಾಧಿಕಾರಿಗೆ ಕರೆ ಮಾಡುವಂತೆ ತಿಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಕರೆ ಮಾಡಿದರೂ ಸೂಕ್ತ ಸ್ಪಂದನೆ ಬಾರದ ಕಾರಣ ತಾಲೂಕು ಆರೋಗ್ಯಾ ಧಿಕಾರಿ ಕಛೇರಿಯ ಆರೋಗ್ಯ ನಿರೀಕ್ಷಕರಿಗೆ ಕರೆ ಮಾಡಿ ಪರಿಶೀಲನೆ ಮಾಡಿ ಔಷಧಗಳ ತೆರವು ಮಾಡದೆ ಇದ್ದಲ್ಲಿ ಎಲ್ಲವನ್ನು ತುಂಬಿ ಕೊಂಡು ಬಂದು ಕಚೇರಿ ಆವರಣದಲ್ಲಿ ಸುರಿಯುವುದಾಗಿ ನಾಗರಿಕರಾದ ರಮೇಶ್ ಇತರರು ಎಚ್ಚರಿಸಿದರು, ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಮಧ್ಯೆ ಪುರಸಭೆ ಪರಿಸರ ಅಭಿಯಂತರರಿಗೂ ಕರೆ ಮಾಡಿದ ಮೇರೆಗೆ ಪರಿಸರ ಅಭಿಯಂತರ ಚಂದ್ರಶೇಖರ್ ಭೇಟಿ ನೀಡಿದ್ದು, ಆರೋಗ್ಯ ನಿರೀಕ್ಷಕ ಯಾಲಕ್ಕಿಗೌಡ, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮತ್ತು ತುಮಕೂರಿನಿಂದ ಸಹಾಯಕ ಔಷಧ ನಿಯಂತ್ರಕ ಮಲ್ಲಿಕಾರ್ಜುನ ನಾಗೂರ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬಹುತೇಕ ಔಷಧ ಗಳು 2021, 23ನೇ ಸಾಲಿನಲ್ಲೆ ಅವಧಿ ಮೀರಿದ್ದು ಕಂಡು ಬಂದಿತಲ್ಲದೆ ರಾಶಿಯಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಗೆ ಸರಬರಾಜು ಮಾಡಿದ ಅವಧಿ ಮೀರಿದ ಔಷಧಗಳು ಪತ್ತೆಯಾದವು.
ಅಧಿಕಾರಿಗಳು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ಸಾರ್ವಜನಿಕ ಆಸ್ಪತ್ರೆಯ ಮೂಲಕ ಅವಧಿ ಮೀರಿದ ಔಷಧಗಳನ್ನು ವೈಜ್ಞಾನಿಕವಾಗಿ ವಿಲೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ, ಸಾಮಾಜಿಕ ಕಾರ್ಯಕರ್ತ ದಿನೇಶ್, ಔಷಧ ನಿಯಂತ್ರಕರು ಈ ಔಷಧಗಳ ಪೂರೈಕೆ ಮಾಡಿದ ಕಂಪನಿಗಳಿಂದ ಮಾಹಿತಿ ಪಡೆದು ಸದರಿಯವರ ಮೇಲೆ ಕ್ರಮ ಜರುಗಿಸಬೇಕು ಎಂದರು.

ಜನವಸತಿ ಪ್ರದೇಶದಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಪರಿಸರ ಅಭಿಯಂತರರು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪರಿಸರ ಅಭಿಯಂತರ ಚಂದ್ರಶೇಖರ್ ಪ್ರತಿಕ್ರಿಯಿಸಿ, ಜನವಸತಿ ಪ್ರದೇಶದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದು ಪರಿಸರ ಹಾಳು ಮಾಡಿದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಮೇಲೆ ಕ್ರಮಕ್ಕೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!