ತುಮಕೂರು: ರಾಜ್ಯಪಾಲರು ಬೆದರುಗೊಂಬೆ ಅಲ್ಲ, ಸಾಂವಿಧಾನಿಕ ಹುದ್ದೆ, ರಾಜ್ಯದ ಆಡಳಿತ ಯಂತ್ರ ದುರುಪಯೋಗವಾದಾಗ, ಸರ್ಕಾರದ ಖಜಾನೆ ಲೂಟಿಯಾದಾಗ, ಸಾರ್ವಜನಿಕ ಆಸ್ತಿಯನ್ನು ಸ್ವಾರ್ಥಕ್ಕೆ ಬಳಸಿಕೊಂಡಾಗ, ಸರ್ಕಾರ ತಪ್ಪು ದಾರಿಗೆ ಇಳಿದಾಗ ರಾಜ್ಯಪಾಲರು ಕಾನೂನಾತ್ಮಕ ಕಾರ್ಯಾಚರಣೆ ಮಾಡುತ್ತಾರೆ, ನಿಮ್ಮ ಕರ್ಮಕಾಂಡ ಮುಚ್ಚಿಕೊಳ್ಳಲು ರಾಜ್ಯಪಾಲರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡುವುದನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಒತ್ತಾಯಿಸಿದರು.
ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಅತ್ಯಂತ ಹೀನಾಯವಾಗಿ ನಡೆದುಕೊಳ್ಳುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಕಾಂಗ್ರೆಸ್ ನವರು ರಾಜ್ಯದಲ್ಲಿ ಹೀಗೆ ಅರಾಜಕತೆ ಪ್ರಾರಂಭ ಮಾಡಿದರೆ ಕೇಂದ್ರ ಸರ್ಕಾರ ಖಂಡಿತವಾಗಿಯೂ ಸಂಭವವಾದ ಕ್ರಮಕ್ಕೆ ಆಲೋಚನೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ನಡೆದ ಘಟನೆಗಳು ರಾಜ್ಯ ಕಾಂಗ್ರೆಸ್ ಸರ್ಕಾರ ಇರುವುದೇ ಭ್ರಷ್ಟಾಚಾರ ಮಾಡೋದಿಕ್ಕೆ ಎಂಬುದಕ್ಕೆ ಸಾಕ್ಷಿಯಾಗಿವೆ, ಪಾದಯಾತ್ರೆ ಸಂದರ್ಭವು ಕಾಂಗ್ರೆಸ್ ನಾಯಕರ ಮುಖವಾಡವನ್ನು ಜನರಿಗೆ ತೋರಿಸಿದೆ, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ನವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಭಾರತ ದೇಶ ಕೂಡಾ ಬಾಂಗ್ಲಾ, ಆಫ್ಘಾನಿಸ್ತಾನ ಮಾಡಲು ಹೊರಟಂತಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಹಗರಣಗಳಲ್ಲಿ ಸಿಕ್ಕಿಕೊಂಡಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಪ್ರಾಮಾಣಿಕ ಎಂದು ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿದ್ದಾರೆ, ಅವರಿಗೆ ನೈತಿಕತೆ ಎನ್ನುವುದಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಡಾ ಹಗರಣದ ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಚಿದಾನಂದಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮರೆಯಲ್ಲಿ ತಾವು ಏನು ಬೇಕಾದರೂ ಮಾಡಬಹುದು ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಮಾಡಲು ಹೊರಟಿದೆ, ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕು ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ರಾಜ್ಯ ಬಿಜೆಪಿ ವಕ್ತಾರ ಹೆಚ್.ಎನ್.ಚಂದ್ರಶೇಖರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್ ಗೌಡ, ಹಾಲೇಗೌಡ, ಕಾರ್ಯದರ್ಶಿಗಳಾದ ಹೆಚ್.ಎಂ.ರವೀಶಯ್ಯ ಇತರರು ಇದ್ದರು.
Comments are closed.