ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದಲ್ಲಿ ಹೇಮಾವತಿ ನಾಲೆ ಹಾಗೂ ನೀರು ಹರಿಯುವ ಸೇತುವೆ ಕುಸಿಯುತ್ತಿದ್ದು ಅಧಿಕಾರಿಗಳ ಕಳಪೆ ಕಾಮಗಾರಿಯಿಂದ ನಾವು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ನಿಟ್ಟೂರು ಪುರ ಕೆರೆ ಎಷ್ಟು ಬೇಗ ತುಂಬುತ್ತೋ ಅಷ್ಟೇ ಬೇಗ ಖಾಲಿ ಆಗುತ್ತಿದೆ, ಹೇಮಾವತಿ ಅಧಿಕಾರಿಗಳು ಮಾಡಿರುವ ಕಳಪೆ ಕಾಮಗಾರಿಯಿಂದ ನಮ್ಮ ಜಮೀನುಗಳ ಮೇಲೆ ಅಧಿಕ ನೀರು ನುಗ್ಗುವುದರಿಂದ ರೈತರು ಗದ್ದೆಗಳಲ್ಲಿ ರಾಗಿ, ಭತ್ತ ಬೆಳೆದು ಅದೆಷ್ಟೋ ವರ್ಷ ಕಳೆದಿವೆ, ಹೇಮಾವತಿ ಅಧಿಕಾರಿಗಳು ಏಕಾಏಕಿ ಎಸ್ಕೇಪ್ ಎತ್ತುವುದರಿಂದ ನೀರು ಅಧಿಕವಾಗಿ ಹೊರ ಬರುತ್ತಿದ್ದು ರೈತರ ಅಡಿಕೆ ತೋಟಗಳಲ್ಲಿ ಉತ್ಪನ್ನ 40%ಕ್ಕೆ ಇಳಿಕೆಯಾಗಿದೆ, ಕೋಡಿಯಲ್ಲಿ ಹೇಮಾವತಿ ಅಧಿಕಾರಿಗಳು ಕೆನಾಲ್ ಮೂಲಕ ನೀರು ಬಿಡದೆ ಅವರ ಮನಸ್ಸಿಗೆ ಬಂದಂತೆ ನೀರು ಬಿಡುತ್ತಾರೆ, ಇದರಿಂದ ರೈತರು ಬಹಳ ತೊಂದರೆ ಎದುರಿಸಬೇಕಾಗಿದೆ.
ಈ ಭಾಗದಲ್ಲಿ ಹೇಮಾವತಿ ಅಧಿಕಾರಿಗಳು ಹಲವು ಕಾಮಗಾರಿ ಮಾಡಿದ್ದು ಅವುಗಳಲ್ಲಿ ಪುರದ ಕೆರೆ ಕೋಡಿ ಬಿದ್ದ ನೀರು ಹೋಗಲು ಸೇತುವೆ ನಿರ್ಮಾಣ ಮಾಡಿದ್ದಾರೆ, ಆ ಸೇತುವೆಯ ಕೆಳ ಭಾಗಕ್ಕೆ ಸಿಮೆಂಟ್ ಪೈಪ್ ಅಳವಡಿಸಿದ್ದಾರೆ, ಆ ಪೈಪ್ ಗಳು ಹೊಡೆದು ಹೋಗಿದ್ದು ಈಗ ಕುಸಿಯುವ ಹಂತಕ್ಕೆ ತಲುಪಿದೆ, ಸೇತುವೆ ಮೇಲೆ ರೈತರು ತಮ್ಮ ಜಮೀನಿಗೆ ಹೋಗಲು ಹೆದರುವಂತಹ ಪರಿಸ್ಥಿತಿ ಉಂಟಾಗಿದೆ.
ನೀರಿನ ರಭಸಕ್ಕೆ ಇದೆ ಕೋಡಿಯ ಇನ್ನೊಂದು ಸೇತುವೆ ಬಿದ್ದು ಹೋಗಿರುವ ಪರಿಣಾಮ ಪಕ್ಕದಲ್ಲಿರುವ ರಸ್ತೆಯ ಮಣ್ಣು ಕುಸಿದು ಬೀಳುತ್ತಿದೆ, ಇದೆ ರೀತಿ ಮಳೆ ಬಿದ್ದರೆ ಕೆಲವೇ ದಿನಗಳಲ್ಲಿ ರಸ್ತೆಯ ಪೂರ್ತಿ ಮಣ್ಣು ಕುಸಿದು ಓಡಾಡಲು ರಸ್ತೆ ಇಲ್ಲದಂತಾಗುತ್ತದೆ.
ಕೆರೆಯ ಪಕ್ಕದಲ್ಲಿ ದೇವಸ್ಥಾನವಿದ್ದು ಮಳೆ ಜಾಸ್ತಿ ಆದರೆ ದೇವಸ್ಥಾನದ ಹಿಂಭಾಗಕ್ಕೆ ನೀರು ನುಗ್ಗಿ ದೇವಸ್ಥಾನದ ಕಟ್ಟಡಕ್ಕೂ ಬಹಳ ತೊಂದರೆ ಆಗುತ್ತಿದೆ, ಇದಕ್ಕೆಲ್ಲ ಹೇಮಾವತಿ ಅಧಿಕಾರಿಗಳು ಮಾಡಿರುವ ಕಳಪೆ ಕಾಮಗರಿಗಳೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಆನಂದ್ ಹಾಗೂ ಪ್ರಭು ಪ್ರಸಾದ್ ತಿಳಿಸಿದರು.
Comments are closed.