ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿಯಲ್ಲಿ ಇತ್ತೀಚೆಗೆ ವಾಂತಿ ಭೇದಿ ಕಾಣಿಸಿಕೊಂಡು 7 ಜನ ಮೃತಪಟ್ಟ ಘಟನೆ ಮಾಸುವ ಮುನ್ನವೇ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರ ಗ್ರಾಮದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, ವಾಂತಿ, ಭೇದಿ ಕಾಣಿಸಿಕೊಂಡು ಮೂವರು ಮೃತಪಟ್ಟ ಘಟನೆ ವರದಿಯಾಗಿದೆ.
ಬುಳ್ಳಸಂದ್ರ ಗ್ರಾಮದ ತಿಮ್ಮಕ್ಕ (85), ಗಿರಿಯಮ್ಮ (90) ಹಾಗೂ ಮಡಕಶಿರಾ ತಾಲ್ಲೂಕಿನ ಸಿದ್ದಗಿರಿ ಗ್ರಾಮದ ಕಾಟಮ್ಮ (45) ಮೃತರು, ಇನ್ನು 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಬುಳ್ಳಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ, ತೀವ್ರವಾಗಿ ಅಸ್ವಸ್ಥರಾಗಿದ್ದ ಇಬ್ಬರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ಜಾತ್ರೆ ನಿಲ್ಲಿಸಿದ ಸೂತಕದ ವಾತಾವರಣ
ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ಶನಿವಾರ ಕರಿಯಮ್ಮ ಮುತ್ತುರಾಯ ಭೂತಪ್ಪ ಸ್ವಾಮಿ ಜಾತ್ರೆ ಆರಂಭವಾಗಿದ್ದು, ಜಾತ್ರೆಗಾಗಿ ಮೂರು ಕುಟುಂಬಗಳು ಮನೆಯಲ್ಲಿ ಅಡುಗೆ ತಯಾರಿಸಿ ಸೇವನೆಯಿಂದ ಆಹಾರದಿಂದಾಗಿ 8 ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದ ಮೂವರು ಮೃತಪಟ್ಟಿದ್ದಾರೆ.
ಗ್ರಾಮಸ್ಥರೇನು ಹೇಳುತ್ತಾರೆ?
ಗ್ರಾಮದಲ್ಲಿ ಶನಿವಾರ ಜಾತ್ರೆ ಆರಂಭವಾಗಿದ್ದು, ಮನೆಯಲ್ಲಿ ತಯಾರಿಸಿ ಸೇವಿಸಿದ ಆಹಾರ ತಿಂದು ಮೂರು ಕುಟುಂಬದವರು ಮಾತ್ರ ಅಸ್ವಸ್ಥರಾಗಿ ಮೂವರು ಮೃತಪಟ್ಟಿದ್ದು, ಉಳಿದವರಿಗೆ ಯಾವುದೇ ಸಮಸ್ಯೆಯಾಗಿಲ್ಲ, ಅಲ್ಲದೇ ಜಾತ್ರೆಯಲ್ಲಿ ಯಾವುದೇ ಅಡುಗೆ ಸಹ ತಯಾರಿಸಿರಲಿಲ್ಲ, ತಿಮ್ಮಕ್ಕ (85), ಗಿರಿಯಮ್ಮ (90) ವಯೋ ಸಹಜ ಹಿನ್ನೆಲೆಯಲ್ಲಿ ಮೃತಪಟ್ಟಿದ್ದು, ಇನ್ನು ಸಿದ್ದಮ್ಮ ಮಡಕಶಿರಾ ತಾಲ್ಲೂಕಿನ ಸಿದ್ದಗಿರಿ ಗ್ರಾಮದವರಾಗಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ತವರು ಮನೆಗೆ ಬಂದಿದ್ದು, ವಾಂತಿ ಭೇದಿಯಿಂದ ಅಸ್ವಸ್ಥರಾಗಿ ಮೃತಪಟ್ಟಿದ್ದು, ಗ್ರಾಮದಲ್ಲಿ ಮೂವರು ಮೃತ ಪಟ್ಟ ಹಿನ್ನೆಲೆಯಲ್ಲಿ ಸೂತಕದ ವಾತಾವರಣದಿಂದಾಗಿ ಜಾತ್ರೆ ಸ್ಥಗಿತಗೊಳಿಸಲಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಗ್ರಾಮದಲ್ಲಿ ಒಂದೇ ಕಡೆ ಇದ್ದ ಮೂರು ಕುಟುಂಬದವರಿಗೆ ವಾಂತಿ- ಭೇದಿ ಸಮಸ್ಯೆ ಕಾಣಿಸಿಕೊಂಡಿದ್ದು, ಉಳಿದವರಿಗೆ ಯಾವುದೇ ಸಮಸ್ಯೆಯಾಗಿಲ್ಲ, ಅಸ್ವಸ್ಥರಾದವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ಶಾಲೆಯಲ್ಲೇ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ, ಗ್ರಾಮದಲ್ಲಿ ಯಾವುದೇ ಫುಡ್ ಪಾಯಿಸನ್ ಮತ್ತು ಕಲುಷಿತ ನೀರು ಸೇವನೆ ಪ್ರಕರಣ ನಡೆದಿಲ್ಲಎಂದು ತಿಳಿಸಿದ್ದಾರೆ.
Comments are closed.