ತುಮಕೂರು: ಸ್ವಯಂ ಉದ್ಯೋಗಗಳಿಂದ ನೂರಾರು ಕುಟುಂಬಗಳಿಗೆ ಅನ್ನದಾತರಾಗಿ ಬದುಕಿನ ಸಾರ್ಥಕತೆ ಕಂಡುಕೊಳ್ಳಬಹುದು ಎಂದು ರಾಜ್ ಟೆಕ್ನಾಲಜೀಸ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಶ್ ಹಿರೇಮಠ್ ಹೇಳಿದರು.
ತುಮಕೂರು ವಿವಿ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿರುವ ಉದ್ಯಮಶೀಲತಾ ಸಪ್ತಾಹದ ಅಂಗವಾಗಿ ಮೂರು ದಿನಗಳ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಗಳ ನವ್ಯೋದ್ಯಮ ಮಳಿಗೆ ಉದ್ಘಾಟಿಸಿ ಮಾತನಾಡಿ, ಭಾರತೀಯರನ್ನು ಗುಲಾಮರನ್ನಾಗಿ, ಕೆಲಸಗಾರರನ್ನಾಗಿ ರೂಪಿಸಿದ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಹಿಮ್ಮೆಟ್ಟಿಸಿ ನಮ್ಮ ಉತ್ಸಾಹಕ್ಕೆ ಪೂರಕವಾದ ಮಾರ್ಗ ಆರಿಸಿ ನಡೆಯುವ ಕಾಲವಿದು, ವಾಣಿಜ್ಯೋದ್ಯಮಿ ಆಗುವವರಿಗೆ ನಮ್ಯತೆ, ಸ್ವಾತಂತ್ರ್ಯ, ಸ್ವಾಯತ್ತತೆ, ಸೃಜನಶೀಲತೆ, ಉತ್ಸಾಹವೇ ಬಂಡವಾಳ, ವಿವಿಧ ಸೇವೆ ಒದಗಿಸುವ ವ್ಯವಹಾರ ಪ್ರಾರಂಭಿಸುವುದೇ ಪ್ರಸ್ತುತ ಪ್ರವೃತ್ತಿ ಎಂದು ತಿಳಿಸಿದರು.
ಉದ್ಯಮಿ ಡಾ.ಆರ್.ಎಲ್.ರಮೇಶ್ ಬಾಬು ಮಾತನಾಡಿ, ವಿಭಿನ್ನ ಆಲೋಚನೆಗಳೇ ಯಶಸ್ವಿ ಜೀವನಕ್ಕೆ ಮುನ್ನುಡಿ, ಸಮಾಜಮುಖಿ ಉದ್ಯಮ ಆರಂಭಿಸಿದಾಗ ಜನರನ್ನು ಬೇಗ ತಲುಪಬಹುದು, ಪರಿಸರ ಸ್ನೇಹಿ, ಜನ ಸ್ನೇಹಿ ಉತ್ಪನ್ನಗಳನ್ನು ಜನರು ಬಯಸುತ್ತಾರೆ, ಉತ್ಪನ್ನದ ಗುಣಮಟ್ಟದ ಮೇಲೆ ಜನರ ನಂಬಿಕೆ ಗಳಿಸಿ ಉದ್ಯಮವನ್ನು ಎತ್ತರಕ್ಕೆ ಕೊಂಡೊಯ್ಯಬಹುದು ಎಂದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ. ಮಾತನಾಡಿ, ಸ್ವಯಂ ಉದ್ಯಮ ಆರಂಭಿಸುವ ಮುನ್ನ ಮಾರುಕಟ್ಟೆಯ ವಾಸ್ತವ ಅನುಭವಗಳ ಪರಿಚಯವಾಗಬೇಕು, ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮದ ಮೇಲಿರುವ ಬದ್ಧತೆಯು ಯಶಸ್ಸಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ವಿವಿಯ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ನೂರ್ ಅಫ್ಜಾ ಮಾತನಾಡಿ, ಪ್ರಾಯೋಗಿಕವಾಗಿ ನವೋದ್ಯಮ ಆರಂಭಿಸಿ, ಉದ್ಯಮಿಗಳಾಗಲು ಈ ಸಪ್ತಾಹ ಸಹಕಾರಿಯಾಗಲಿದೆ, ಗೋಡೆಗಳಾಚೆ ವಿಭಿನ್ನ ಕಲ್ಪನೆ ಹುಡುಕುವುದು ಸಪ್ತಾಹದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ವಿದ್ಯಾರ್ಥಿಗಳೇ ಸಣ್ಣ ಬಂಡವಾಳದ ಆಹಾರ, ಸಿರಿಧಾನ್ಯ, ಫ್ಯಾಷನ್, ಗೃಹ ಅಲಂಕಾರ ಮಳಿಗೆಗಳನ್ನು ತೆರೆದಿದ್ದರು, ಮೂರು ದಿನಗಳ ವರೆಗೂ ತೆರೆದಿರುವ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಸಾರ್ವಜನಿಕರು ಮಧ್ಯಾಹ್ನ 1 ಗಂಟೆಯ ನಂತರ ಭೇಟಿ ನೀಡಬಹುದಾಗಿದೆ.
ವಿವಿ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ವಿಭಾಗದ ಹಿರಿಯ ವಿದ್ಯಾರ್ಥಿ, ಚಂದ್ರಮೌಳೇಶ್ವರ ಟ್ರೇಡರ್ಸ್ನ ಮುಖ್ಯ ಕಾರ್ಯ ನಿರ್ವಾಹಕಅಧಿಕಾರಿ ಮತ್ತು ಮಾರುತಿ ಆಗ್ರೋ ನರ್ಸರಿ ಸಂಸ್ಥಾಪಕ ಕೋದಂಡರಾಮ.ಎನ್, ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ.ಮೋಹನ್ ರಾಮ್, ಉಪನ್ಯಾಸಕಿ ಇಂಪಾ ಇತರರು ಇದ್ದರು.
Comments are closed.