ಪಾಲಿಕೆಯಿಂದ ಗಾರೆನರಸಯ್ಯನ ಕಟ್ಟೆ ಒತ್ತುವರಿ

16

Get real time updates directly on you device, subscribe now.


ತುಮಕೂರು: ನಗರದ 30ನೇ ವಾರ್ಡ್ನ ಸಪ್ತಗಿರಿ ಬಡಾವಣೆಯ ಗಾರೆನರಸಯ್ಯನ ಕಟ್ಟೆ ಅಂಗಳದ ಪೂರ್ವ ಭಾಗದ ಸರ್ಕಾರಿ ಖರಾಬು ಜಾಗದಲ್ಲಿ ಭೂಗಳ್ಳರಿಗೆ ಬಡಾವಣೆ ನಿರ್ಮಿಸಲು ಅನುಕೂಲವಾಗುವಂತೆ ಕಟ್ಟೆಯ ಅಂಗಳದಲ್ಲಿ ಚೈನ್ ಲಿಂಕ್ ಪೆನ್ಸಿಂಗ್ ನೆಪದಲ್ಲಿ ಸುಮಾರು ಒಂದು ಎಕರೆ ಕಟ್ಟೆ ಅಂಗಳವನ್ನು ಮಹಾನಗರ ಪಾಲಿಕೆಯವರು ಒತ್ತುವರಿ ಮಾಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಖಂಡಿಸಿದ್ದಾರೆ.

19.1 ಎಕರೆ ವಿಸ್ತೀರ್ಣದ ಗಾರೆ ನರಸಯ್ಯನ ಕಟ್ಟೆಯ ಪೂರ್ವ ಭಾಗದಲ್ಲಿ ಚೈನ್ ಲಿಂಕ್ ಪೆನ್ಸಿಂಗ್ ಕಾಮಗಾರಿ, ಲೆಕ್ಕಶಿರ್ಷಿಕೆ- 2013- 14ನೇ ಸಾಲಿನಲ್ಲಿ ವಿಶೇಷ ಅನುದಾನ ಅಂದಾಜು ಮೊತ್ತ 60 ಲಕ್ಷ ಹಣದಲ್ಲಿ 915 ಮೀ. ಉದ್ದದ ಚೈನ್ ಲಿಂಕ್ ಪೆನ್ಸಿಂಗ್ ನ್ನು ಮಹಾನಗರ ಪಾಲಿಕೆಯವರು ಕಟ್ಟೆಯ ಅಂಗಳದಲ್ಲಿ ಕಾಮಗಾರಿ ಮಾಡಿದ್ದಾರೆ, ಇದರಿಂದ ಕಟ್ಟೆಯ ಪೂರ್ವ ಭಾಗದ ಎರಡು ಎಕರೆ ಸರ್ಕಾರಿ ಖರಾಬು ಜಾಗದಲ್ಲಿ ಭೂಗಳ್ಳರು ಬಡಾವಣೆ ಮಾಡಲು ಮಹಾನಗರ ಪಾಲಿಕೆ ಹಾಗೂ 30ನೇ ವಾರ್ಡ್ನ ಹಿಂದಿನ ಕೌನ್ಸಿಲರ್ ಗಳು ಸುಗಮಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ, 2015 ರಿಂದಲೂ ಈ ಭಾಗದ ನಾಗರಿಕರು ಕೌನ್ಸಿಲರ್ ಮತ್ತು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಜಾಣ ಕುರುಡರಂತೆ ಅವಧಿ ಮುಗಿಸಿಕೊಂಡು ಹೋಗಿದ್ದಾರೆ.

ಈಗಾಗಲೇ ಎರಡು ಎಕರೆ ಸರ್ಕಾರಿ ಖರಾಬು ಜಾಗದಲ್ಲಿ ಲೇಔಟ್ ಮಾಡಿ ಸೈಟ್ ಗಳನ್ನು ಮಾರಾಟ ಮಾಡಿದ್ದಾರೆ, ಸರ್ಕಾರಿ ಸುಬರ್ದಿನಲ್ಲಿರುವ ಸರ್ಕಾರಿ ಖರಾಬು ಜಾಗದಲ್ಲಿ ಲೇಔಟ್ ಮಾಡಲು ತುಮಕೂರು ಟೂಡಾದವರು ಹಾಗೂ ಪಾಲಿಕೆಯವರು ನ್ಯಾಯಲಯದ ಎಲ್ಲಾ ಕಾಯ್ದೆಗಳನ್ನು ಗಾಳಿಗೆ ತೂರಿದ್ದಾರೆ, ನ್ಯಾಯಲದ ಆದೇಶದ ಪ್ರಕಾರ ಕೆರೆ,ಕಟ್ಟೆಗಳ ಅಂಗಳದಿಂದ 30ಮೀ ಒಳಗೆ ಯಾವುದೇ ಕಟ್ಟಡ ನಿರ್ಮಾಣ ಅಥವಾ ಅಭಿವೃದ್ಧಿ ಕಾರ್ಯಗಳಿಗೆ ಪರವಾನಗಿ ಕೊಡಬಾರದೆಂಬ ಕಾನೂನಿದ್ದರೂ ಮಹಾ ನಗರಪಾಲಿಕೆಯ ಅಧಿಕಾರಿಗಳು ದುಸ್ಸಾಹಸಕ್ಕೆ ಕೈ ಹಾಕಿರುವುದನ್ನು ನಿಸರ್ಗ ಸಂಸ್ಥೆ ಖಂಡಿಸಿದೆ.

ಪಾಲಿಕೆಯ ಆಯುಕ್ತರು ಕಟ್ಟೆಯ ಅಂಗಳದಲ್ಲಿ ಹಾಕಿರುವ ಚೈನ್ ಲಿಂಕ್ ಪೆನ್ಸಿಂಗ್ ತೆರವುಗೊಳಿಸಿ ಆ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾದಬೇಕು, ಅಲ್ಲದೆ ಸರ್ಕಾರಿ ಖರಾಬು ಜಾಗದಲ್ಲಿ ಲೇಔಟ್ ಮಾಡಲು ಕೊಟ್ಟಿರುವ ಪರವಾನಗಿ ರದ್ದುಗೊಳಿಸಿ ಜಿಲ್ಲಾ ಕೆರೆ ಜಾಗೃತಿ ಮಾಹಿತಿ ಕೇಂದ್ರ ಸ್ಥಾಪಿಸಬೇಕು, ಕೋಡಿ ಹತ್ತಿರ ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸಿ ಈ ಪ್ರದೇಶದಲ್ಲಿ ಘನತ್ಯಾಜ್ಯ ಸುರಿಯುವುದನ್ನು ನಿಷೇಧಿಸಿ ಕಟ್ಟೆ ಸಂರಕ್ಷಿಸನೇಕೆಂದು ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!