ತುಮಕೂರು: ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಲಕ್ಷ್ಮೀ ಆರ್. ಹೆಬ್ಬಾಳಕರ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೌಟುಂಬಿಕ ದೌರ್ಜನ್ಯ ತಡೆಕಾಯ್ದೆಯಡಿ ಮಹಿಳೆಯರಿಗೆ ಅನ್ಯಾಯವಾಗದಂತೆ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಗೃಹಲಕ್ಷ್ಮಿ ಯೋಜನೆಯ ಪ್ರಗತಿ, ಜಿಲ್ಲಾ ಹಾಗೂ ತಾಲ್ಲೂಕು ಶಿಶುಪಾಲನಾ ಕೇಂದ್ರಗಳು, ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಲಭ್ಯ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.
ಗೃಹಲಕ್ಷ್ಮಿಯರಿಗೆ 28268 ಕೋಟಿ
ರಾಜ್ಯದಲ್ಲಿ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 28268 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ, ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹಿಳೆಯರಿಂದ ಮೆಚ್ಚುಗೆ ಮಾತುಗಳು ವ್ಯಕ್ತವಾಗಿವೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಇಲಾಖೆಯಡಿ ನಡೆಯುತ್ತಿರುವ ಅಂಗವನಾಡಿ ಕೇಂದ್ರ, ಸಾಂತ್ವನ ಕೇಂದ್ರ, ಶಿಶು ಪಾಲನಾ ಕೇಂದ್ರ, ಸ್ವೀಕಾರ ಕೇಂದ್ರ, ಬಾಲಮಂದಿರ, ವೃದ್ಧಾಶ್ರಮದ ಪ್ರಗತಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 4199 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ, ಜಿಲ್ಲೆಯಲ್ಲಿ 5 ವರ್ಷದೊಳಗಿನ ತೀವ್ರ ಅಪೌಷ್ಟಿಕತೆಯ 353 ಮಕ್ಕಳಿದ್ದು, ಈ ಪೈಕಿ 69 ಮಕ್ಕಳನ್ನು ವೈದ್ಯರ ಶಿಫಾರಸ್ಸಿನ ಮೇರೆಗೆ ಎನ್ ಆರ್ ಸಿ, ಎಂ ಎನ್ ಆರ್ ಸಿ ಕೇಂದ್ರಕ್ಕೆ ದಾಖಲಿಸಲಾಗಿದೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಿರಾ ಶಾಸಕ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್ ಹಾಗೂ ನಿರ್ದೇಶಕ ಸಿದ್ದೇಶ್ವರ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಮರಿಯಪ್ಪ, ವಿಕಲ ಚೇತನರ ಹಾಗೂ ಹಿರಿಯ ಸಬಲೀಕರಣ ಇಲಾಖೆ ನಿರ್ದೇಶಕ ರಾಘವೇಂದ್ರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಜಂಟಿ ನಿರ್ದೇಶಕರಾದ ಪುಷ್ಪಾ ರಾಯ್ಕರ್, ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಮಹಿಳಾ ಅಭಿವೃದ್ಧಿ ಅಧಿಕಾರಿ ಪವಿತ್ರ ಇತರರು ಇದ್ದರು.
Comments are closed.