ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು: ಸ್ವಾಮೀಜಿ

13

Get real time updates directly on you device, subscribe now.


ಕುಣಿಗಲ್: ಶಿಕ್ಷಕ ಕೇವಲ ಎಂಟು ಗಂಟೆ ಕೆಲಸ ಮಾಡುವವನಲ್ಲ, ನಿತ್ಯ ನಿರಂತರ ಅಧ್ಯಯನದ ಮೂಲಕ ಜ್ಞಾನದ ಅರಿವು ಹೊಂದಿ ಇತರರಿಗೂ ಹಂಚುವ ಮಹಾ ಕಾಯಕಯೋಗಿ ಎಂದು ತುಮಕೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 137ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಗೋವಿಂದನನ್ನು ತೋರಿಸಿದ್ದು ಗುರುವೆ ಹೊರತು ಗೋವಿಂದ ಗುರುವನ್ನು ತೋರಿಸಲಿಲ್ಲ, ಹೀಗಾಗಿ ಗುರುವಿಗೆ ಸಮಾಜದಲ್ಲಿ ಅಗ್ರಗಣ್ಯ ಸ್ಥಾನವಿದೆ, ಮಹನೀಯರು ಹೇಳಿದಂತೆ ಗುರುವಿನ ಗುಲಾಮರಾಗಿ ಸತತ ಪರಿಶ್ರಮದ ಮೂಲಕ ಗುರುವಿನ ಮಾರ್ಗದರ್ಶನದಲ್ಲಿ ಉತ್ತಮ ಜ್ಞಾನ ಹೊಂದಬೇಕು, ಎಲ್ಲಾ ವೃತ್ತಿಗಳಿಗಿಂತ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿ, ಸದೃಢ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಲಕ್ಷಾಂತರ ಮಕ್ಕಳಿಗೆ ದೇಶಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ, ಯಾವ ದೇಶ ಶಿಕ್ಷಕರನ್ನು ಗೌರವವಾಗಿ ಕಾಣುತ್ತದೋ ಅ ದೇಶ ಸಮಗ್ರ ಏಳಿಗೆಯತ್ತ ಸಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ರಂಗನಾಥ ಮಾತನಾಡಿ, ಒಪಿಎಸನ್ನು ಜಾರಿಗೊಳಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯ ಅಂಶವಾಗಿದ್ದು, ಒಪಿಎಸ್ ಜಾರಿನಿಟ್ಟಿನಲ್ಲಿ ಸರ್ಕಾರ ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ, ಗ್ಯಾರಂಟಿ ಯೋಜನೆಗೆ 56 ಸಾವಿರ ಕೋಟಿ ರೂ. ಬೇಕಾಗಿದೆ ಹೀಗಿದ್ದರೂ ಏಳನೇ ವೇತನ ಆಯೋಗದ ವೇತನ ಜಾರಿ, ಶಿಕ್ಷಕರಿಗೆ ಆರೋಗ್ಯ ವಿಮೆ ಜಾರಿ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ, ಆಧುನಿಕ ಜಗತ್ತಿನ ಕೃತಕ ಬುದ್ಧಿಮತ್ತೆ ಕ್ಷೇತ್ರ ಶಿಕ್ಷಣ ರಂಗದಲ್ಲಿ ಒಡ್ಡಿರುವ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ಶಿಕ್ಷಕರು ಬೋಧನಾ ಕೌಶಲ್ಯ ರೂಡಿಸಿಕೊಳ್ಳಬೇಕು, ತಾಲೂಕಿನಲ್ಲಿ ಶೀಘ್ರದಲ್ಲೆ ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ, ಗುರುಭವನ ನಿರ್ಮಾಣಕ್ಕೆ ಶಿಕ್ಷಕರು ಸಹಕಾರ ನೀಡಿದ್ದಲ್ಲಿ ತಾವು ಸಹ ಆರ್ಥಿಕ ಸಹಾಯ ನೀಡುವುದಾಗಿ ಹೇಳಿದರು.

ಅನುದಾನಿತ ಶಾಲಾ ಶಿಕ್ಷಕರ ಪರವಾಗಿ ಮಾತನಾಡಿದ ಶಿಕ್ಷಕ ನಿಡಸಾಲೆ ಪ್ರಸಾದ್, ಅನುದಾನಿತ ಶಾಲಾ ಶಿಕ್ಷಕರು ಭಿಕ್ಷೆ ಬೇಡುವ ಸ್ಥಿತಿ ಬಂದಿದ್ದು ಸಮರ್ಪಕ ವೇತನ ನೀಡುತ್ತಿಲ್ಲ, ಒಪಿಎಸ್, ಎನ್ ಪಿ ಎಸ್, ಯುಪಿಎಸ್ ಯಾವುದೇ ವಿಮೆಗೆ ಒಳಪಡುತ್ತಿಲ್ಲ, ನಿವೃತ್ತಿ ನಂತರ ಪಾಠ ಮಾಡಿದ ಶಾಲೆ ಮುಂದೆಯೆ ಭಿಕ್ಷೆ ಬೇಡಿ ಬದುಕುವ ಸ್ಥಿತಿ ಇದ್ದು ಸರ್ಕಾರ ಸೇರಿದಂತೆ ಜನಪ್ರತಿನಿಧಿಗಳು ಶಿಕ್ಷಕರ ಸಮಸ್ಯೆ ಬಗಹರಿಸಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್ ರಶ್ಮಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಬಿಇಒ ಬೋರೇಗೌಡ, ಬಿ ಆರ್ ಸಿ ಶ್ರೀನಿವಾಸ ಮೂರ್ತಿ, ಕಸಾಪ ಅಧ್ಯಕ್ಷ ರಮೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ವಿವಿಧ ಶಿಕ್ಷಕ ಸಂಘದ ಪದಾಧಿಕಾರಿಗಳು ಮಾತನಾಡಿದರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!