ಬಿಳೆನಂದಿ ಅರಣ್ಯ ಪ್ರದೇಶದಲ್ಲಿ ಭೂಗಳ್ಳರ ಕರಾಮತ್ತು

ಗಿಡ ತೆರವುಗೊಳಿಸಿ ಕೃಷಿ ಭೂಮಿ ಮಾಡಲು ಹುನ್ನಾರ- ಗ್ರಾಮಸ್ಥರ ಪ್ರತಿಭಟನೆ

17

Get real time updates directly on you device, subscribe now.


ಗುಬ್ಬಿ: ತಾಲೂಕಿನ ಗಡಿಭಾಗವಾದ ಬಿಳೆನಂದಿ ಅರಣ್ಯ ಪ್ರದೇಶದಲ್ಲಿ ಕೆಲವು ಭೂಗಳ್ಳರು ಗಿಡಗಳನ್ನು ತೆರವುಗೊಳಿಸಿ ಕೃಷಿ ಭೂಮಿಯನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಭಟಿಸಿ ಶುಕ್ರವಾರ ಬಿಳೆ ನಂದಿ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅಕ್ರಮವಾಗಿ ಗಿಡ ಕಡಿಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಅನುಮಾನಕ್ಕೆ ಕಾರಣವಾಗುತ್ತಿದೆ, ಗುಬ್ಬಿ ಮತ್ತು ತುರುವೇಕೆರೆ ಗಡಿ ಭಾಗದಲ್ಲಿ ಬರುವುದರಿಂದ ಎರಡು ತಾಲೂಕುಗಳ ಅಧಿಕಾರಿಗಳು ಒಬ್ಬರ ಮೇಲೆ ಮತ್ತೊಬ್ಬರು ದೂರುತ್ತ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ, ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಭೂಗಳ್ಳರು ಅರಣ್ಯ ಪ್ರದೇಶಕ್ಕೆ ಕನ್ನ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿ ಗಳಿಗೆ ಅಗತ್ಯವಿರುವ ಬೆಂಬಲ ನೀಡಲು ಸುತ್ತಮುತ್ತಲಿನ ಗ್ರಾಮಸ್ಥರು ಸಿದ್ಧರಿದ್ದರೂ ಅಧಿಕಾರಿಗಳು ಮುಂದೆ ಬರದಿರುವುದು ದುರಾದೃಷ್ಟಕರ, ಹೀಗೆ ಆದರೆ ಅರಣ್ಯ ರಕ್ಷಣೆ ಮಾಡುವವರ್ಯಾರು ಎಂದು ಪ್ರಶ್ನಿಸಿದ ಪ್ರತಿಭಟನ ಗ್ರಾಮಸ್ಥರು ಕರೆ ಮಾಡಿದಾಗ ನೆಪ ಮಾತ್ರಕ್ಕೆ ಬಂದು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ, ಆದರೆ ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಅರಣ್ಯಗಳ ಗಿಡ ತೆರವಿಗಾಗಿ ರಾತ್ರಿ ವೇಳೆಯೇ ಜೆಸಿಬಿ ಯಂತ್ರಗಳನ್ನು ತರುತ್ತಾರೆ, ಭಯದಿಂದ ಗ್ರಾಮಸ್ಥರು ಸಮೀಪ ಹೋಗಲು ಹಿಂಜರಿಯುತ್ತಿದ್ದಾರೆ, ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಮುಂದೆ ಬಂದಲ್ಲಿ ಗ್ರಾಮಸ್ಥರು ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಮುಂದುವರೆಸುವೆವು ಎಂದು ಪಟ್ಟು ಹಿಡಿದು ಕುಳಿತಿದ್ದರು, ವಿಷಯ ತಿಳಿದ ಗುಬ್ಬಿ ಮತ್ತು ತುರುವೇಕೆರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಥಳದಿಂದಲೇ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಕರೆ ಮಾಡಿದಾಗ ಗಿಡ ತೆರವುಗೊಳಿಸಿರುವ ಜಾಗದಲ್ಲಿ ಹೊಸದಾಗಿ ಗಿಡ ನೆಡುವದಾಗಿ ಭರವಸೆ ನೀಡಿದರು ಎನ್ನಲಾಗಿದೆ.
ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಅರಣ್ಯ ಪ್ರದೇಶ ಸಂರಕ್ಷಣೆ ಮಾಡದೆ ಅವರ ಜೊತೆ ಕೈಜೋಡಿಸಿದ್ದು ಕಂಡು ಬಂದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!