ಕುಣಿಗಲ್: ಬೆಲೆ ಏರಿಕೆಯ ಹಾವಳಿ ಜೊತೆಯಲ್ಲಿ ಬೆಸ್ಕಾಂ ಠೇವಣಿಯ ಕಿರಿಕಿರಿ ನಡುವೆ ಗಣೇಶ ಹಬ್ಬ ಬಂದಿದ್ದು ಗೃಹಿಣಿಯರು, ಯುವಕರು ಗೊಣಕಾಡಿಕೊಂಡು ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಬಹುತೇಕ ಗ್ರಾಹಕರಿಗೆ ಈ ಮಾಹೆಯ ವಿದ್ಯುತ್ ಬಿಲ್ ನೀಡುವಾಗ ಗೃಹಜ್ಯೋತಿ ಇದ್ದರೂ ನಿಗದಿತ ಠೇವಣಿ ಕೊರತೆ ಎಂದು ಗ್ರಾಹಕರಿಗೆ ಕನಿಷ್ಟ ಐನೂರರಿಂದ ಗರಿಷ್ಟ ಮೂರನಾಲ್ಕುಸಾವಿರ ಠೇವಣಿ ಹದಿನೈದು ದಿನದೊಳಗೆ ಪಾವತಿಸುವಂತೆ ಇಲ್ಲವಾದಲ್ಲಿ ವಿದ್ಯುತ್ ಕಡಿತದ ಎಚ್ಚರಿಕೆ ಬೆಸ್ಕಾಂ ಸಿಬ್ಬಂದಿ ನೀಡುತ್ತಿದ್ದು ಗೃಹಿಣಿಯರು ಸೇರಿದಂತೆ ಬಳಕೆದಾರರು ವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ, ಈ ಸಮಯದಲ್ಲಿ ಡೆಪಾಜಿಟ್ ಕಟ್ಟುವಂತೆ ಬಿಲ್ ನೀಡಿದ್ದಾರೆ, ಹಬ್ಬಾನೆ ಮಡೋಣವೆ ಅಥವಾ ಡೆಪಾಜಿಟ್ ಕಟ್ಟೋಣವಾ, ಇದೆ ದೊಡ್ಡ ಸಮಸ್ಯೆಯಾಗಿದೆ ಎಂದು ವೆಳ್ಳಿಮುತ್ತು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಬಾರಿಗಿಂತ ಈ ಬಾರಿ ಗಣೇಶಮೂರ್ತಿ ದರದಲ್ಲಿ ದುಪ್ಪಟ್ಟಾಗಿದೆ, ಮಣ್ಣಿನ ಗಣಪತಿ ಮಾಡುವ ಪಾರಂಪರಿಕ ಕೆಲಸಗಾರರು ಹೇಳುವಂತೆ ಕನಿಷ್ಟ ಆರು ತಿಂಗಳಿನಿಂದ ಸಿದ್ಧತೆ ಮಾಡಬೇಕು, ಕೂಲಿ ಆಳು, ಬಳಕೆಯ ಕಚ್ಚಾವಸ್ತು ಸಾಗಾಣೆ ಸೇರಿದಂತೆ ಬಣ್ಣಗಳ ದರ, ಸಾಗಾಟ ದರ ಹೆಚ್ಚಿದ್ದು ಮೂರ್ತಿಬೆಲೆ ಏರಿಕೆ ಅನಿವಾರ್ಯ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪಟ್ಟಣದ ಬಹುತೇಕ ಬಡಾವಣೆಯ ರಸ್ತೆ, ರಸ್ತೆಯಲ್ಲೂ ಸೇರಿದಂತೆ ತಾಲೂಕಿನಾದ್ಯಂತ ಹಳ್ಳಿ ಹಳ್ಳಿಗಳಲ್ಲೂ ಸಾಮೂಹಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಜೋರಾಗಿ ನಡೆಯುತ್ತಿದ್ದು, ಜಿಪಂ, ತಾಪಂ ಚುನಾವಣೆಗಳು ಮುಂದಿರುವ ಕಾರಣ ಗ್ರಾಮಾಂತರ ಪ್ರದೇಶದಲ್ಲಿ ಮೂರು ಪಕ್ಷಗಳ ಆಕಾಂಕ್ಷಿಗಳು ಮೂರ್ತಿ ಸ್ಥಾಪನೆ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಮಾಡುವ ಅನಿವಾರ್ಯತೆಯಲ್ಲಿ ಸಿಲುಕಿದ್ದರೆ, ಕೆಲ ನಾಯಕರು ಹೊಡೆತ ತಾಳಲಾರದೆ ನಗರ ಪ್ರದೇಶದಲ್ಲೆ ಕಾಲ ಕಳೆಯುವ ಸ್ಥಿತಿಗೆ ಬಂದಿದ್ದಾರೆ, ಇನ್ನು ಪಟ್ಟಣದ ಪ್ರದೇಶದಲ್ಲಿ ಪುರಸಭೆ ಹಾಲಿ, ಮಾಜಿ ಸದಸ್ಯರಿಗೂ ಮೂರ್ತಿ ಸ್ಥಾಪನೆಯ ನಿಟ್ಟಿನಲ್ಲಿ ವೆಚ್ಚದ ಬಗ್ಗೆ ಕಾವು ತಟ್ಟುತ್ತಿದ್ದು ಕೈಲಾದ ಮಟ್ಟಿಗೆ ವ್ಯವಸ್ಥೆ ಮಾಡುವ ಜೊತೆಯಲ್ಲಿ ಪೊಲೀಸ್ ಸೇರಿದಂತೆ ಸ್ಥಳೀಯಾಡಳಿತ ಹಾಕಿರುವ ನಿಯಮಗಳ ಪರವಾನಗಿ ಮಾಡಿಸಿ ಕೊಡಲು ಶ್ರಮಿಸುತ್ತಿದ್ದಾರೆ, ಈ ಬಾರಿ ಎಲ್ಲಾ ಬಡವಾಣೆಗಳಲ್ಲೂ ಹಲವು ಹಿಂದೂಪರ ಸಂಘಟನೆಯಿಂದ ಭಗವಧ್ವಜ ಸ್ಥಾಪನೆ ಮಾಡಿ ಮೂರ್ತಿ ಸ್ಥಾಪಿಸುವ ಪೆಂಡಾಲ್ನ್ನು ಮುಖ್ಯ ರಸ್ತೆಗಳು ಕೇಸರಿ ಬಂಟಿಂಗ್ಸ್ ನಿಂದ ಕಂಗೊಳಿಸುತ್ತಾ ಹಬ್ಬದ ಕಳೆ ಇಮ್ಮಡಿಗೊಳಿಸಿದೆ.
ಹಬ್ಬಾಚರಣೆ ಹಿನ್ನೆಲೆಯಲ್ಲಿ ಹೂವು, ಹಣ್ಣಿನ ದರದಲ್ಲಿ ತೀವ್ರ ಏರಿಕೆಯಾಗಿದ್ದು ಸೇವಂತಿ ಮಾರು ಒಂದಕ್ಕೆ ಇನ್ನೂರು, ಸಾಮಾನ್ಯಹಾರ 250 ರೂ. ಕಾಕಡ ಮಾರೊಂದಕ್ಕೆ 250 ರೂ, ಗುಲಾಬಿ ಕೆಜಿಗೆ 150 ರಿಂದ 300ರೂ, ಇತರೆ ಹೂಗಳ ಧಾರಣೆ ಕೇಳುವಂತಿಲ್ಲ, ಸಾಕಷ್ಟು ಯುವಕರು ಪ್ಲಾಸ್ಟಿಕ್ ಪೇಪರ್ ಹೂಗಳನ್ನು ಸಿಂಗರಿಸಲು ಖರೀದಿಯಲ್ಲಿ ತೊಡಗಿದ್ದಾರೆ, ವೀಳ್ಯದೆಲೆ ಒಂದಕ್ಕೆ ಒಂದು ರೂ, ಏಲಕ್ಕಿ ಬಾಳೆ ಕೆಜಿ 150 ರೂ. ಪಚ್ಚಬಾಳೆ 50- 70ರೂ, ಸೇಬು- 200 ರೂ, ದಾಳಿಂಬೆ- 250ರೂ, ಮರಸೇಬು-150, ಮೋಸಂಬಿ- 100 ರೂ. ಕೆಜಿಗೆ ದರವಿದ್ದು ಕೊಳ್ಳುವವರ ಕೈ, ಜೇಬು ಎರಡೂ ಸುಡುವಂತಾಗಿದೆ.
Comments are closed.