ದೇಶದ ಅಭಿವೃದ್ಧಿಗೆ ಸಾಕ್ಷರತೆ ಪೂರಕ: ಹಾಲಸಿದ್ದಪ್ಪ

12

Get real time updates directly on you device, subscribe now.


ತುಮಕೂರು: ದೇಶದ ಅಭಿವೃದ್ಧಿಗೆ ಸಾಕ್ಷರತೆ ಪೂರಕವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಡಯಟ್, ಬೆಂಗಳೂರು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಲೋಕ ಶಿಕ್ಷಣ ವಿಭಾಗ), ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಯುನೆಸ್ಕೊದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಆಚರಣೆ ಪ್ರಾರಂಭಿಸಲಾಯಿತು, ಪ್ರಸಕ್ತ 2024ರ ಸಾಕ್ಷರತಾ ದಿನಚರಣೆಯನ್ನು ಬಹು ಭಾಷೆಗಳ ಮೂಲಕ ಸಾಕ್ಷರತೆಯ ಉತ್ತೇಜನ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ, ಸಾಕ್ಷರತೆಯಿಂದ ನಮ್ಮಲ್ಲಿರುವ ಜ್ಞಾನ ವೃದ್ಧಿಯಾಗುವುದಲ್ಲದೆ, ಸಾಮಾಜಿಕ ಅನಿಷ್ಟ ಪದ್ಧತಿ ನಿವಾರಿಸಬಹುದಾಗಿದೆ ಎಂದು ತಿಳಿಸಿದರು.

ಸಾಕ್ಷರತೆಯಿಂದ ಅನಕ್ಷರಸ್ಥರಲ್ಲಿ ಸ್ವಾವಲಂಬನೆ ಹೆಚ್ಚುತ್ತದೆ, ಸಂವಿಧಾನದಲ್ಲಿ ಕಲ್ಪಿಸಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡುತ್ತದೆ ಎಂದು ತಿಳಿಸಿದರಲ್ಲದೆ ಜಿಲ್ಲೆಯಲ್ಲಿ ಶೇ.85.70 ಪುರುಷರು ಹಾಗೂ ಶೇ.67.38 ಮಹಿಳೆಯರು ಸೇರಿದಂತೆ ಒಟ್ಟು ಶೇ.75.14ರಷ್ಟಿರುವ ಸಾಕ್ಷರತಾ ಪ್ರಮಾಣವನ್ನು ಶೇ.100ಕ್ಕೆ ಕೊಂಡೊಯ್ಯಲು ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಶಿಕ್ಷಣಾಧಿಕಾರಿ ನರಸಿಂಹಯ್ಯ ಅವರು ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು, ಡಯಟ್ ಉಪ ನಿರ್ದೇಶಕ ಮಂಜುನಾಥ್, ಇಓ ಮಾಧವರೆಡ್ಡಿ, ಡಿಇಓ ಲಕ್ಷ್ಮೀಜನಾರ್ಧನ್, ಬಿಇಒ ಹನುಮಂತಯ್ಯ, ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಡಯಟ್ ಹಿರಿಯ ಉಪನ್ಯಾಸಕ ಎನ್.ನಂಜುಂಡಯ್ಯ ಹಾಗೂ ರಂಗರಾಜು, ಕಾರ್ಯಕ್ರಮದ ಸಹಾಯಕ ಅಧಿಕಾರಿ ಸಿ.ಎಂ.ಲಕ್ಷ್ಮೀ, ಇಸಿಓ, ಬಿಆರ್ಪಿ, ಸಿಆರ್ಪಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರ ತಂದಿರುವ ಎಲ್ಲರಿಗೂ ಶಿಕ್ಷಣ ಕುರಿತಾದ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.

ಸಾಕ್ಷರತಾ ಪ್ರಮಾಣ ವಚನ ಸ್ವೀಕಾರ
ಸಾಕ್ಷರತಾ ಕಾರ್ಯಕ್ರಮಗಳು ಕರ್ನಾಟಕವನ್ನು ಸಾಕ್ಷರ ಸಮೃದ್ಧ, ಸುಸ್ಥಿರ ಮತ್ತು ಅಭಿವೃದ್ಧಿ ನಾಡನ್ನಾಗಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳು ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದೇನೆ, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಮನೆ ಹಾಗೂ ಮನವನ್ನು ತಲುಪಿ, ಮಹಿಳೆ ಮತ್ತು ಶಿಕ್ಷಣ ವಂಚಿತ ವರ್ಗದವರ ಕಲಿಕೆಗಾಗಿ ಈ ಕಾರ್ಯಕ್ರಮವು ಜನಾಂದೋಲನಗೊಳ್ಳಲು ಕಾಯಾ ವಾಚಾ ಮನಸಾ ಪಾಲ್ಗೊಂಡು ಸೇವೆ ಸಲ್ಲಿಸುವ ಸಂಕಲ್ಪ ಮಾಡಿಕೊಂಡಿದ್ದೇನೆ, ಅನಕ್ಷರಸ್ಥರೆಲ್ಲರೂ ಅಕ್ಷರ ಕಲಿತು ಸಾಕ್ಷರಸ್ಥರಾಗಿ ಕೌಶಲಾಭಿವೃದ್ಧಿ ಹೊಂದಲು ಹಾಗೂ ಕಲಿಯುತ್ತಿರುವ ಸಮಾಜದ ನಿರ್ಮಾಣಕ್ಕಾಗಿ ನಾನು ಕಲಿತ ಋಣ ಕಲಿಸಿ ತೀರಿಸುತ್ತೇನೆಂದು ಪ್ರಮಾಣೀಕರಿಸುತ್ತೇನೆ ಎಂದು ಪ್ರಮಾಣ ವಚನ ಬೋಧಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!