ತುಮಕೂರು: ಪ್ರತಿಭಾ ಕಾರಂಜಿ, ಕಲೋತ್ಸವಗಳಲ್ಲಿ ಭಾಗವಹಿಸುವ ಮಕ್ಕಳು, ನಮ್ಮ ಮಕ್ಕಳೇ ಆಗಿರುವುದರಿಂದ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ತೀರ್ಪುಗಾರರು ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಡಯಟ್ ನ ಪ್ರಾಂಶುಪಾಲರು ಹಾಗೂ ಡಿಡಿಪಿಐ ಕೆ.ಮಂಜುನಾಥ ತಿಳಿಸಿದ್ದಾರೆ.
ನಗರದ ಉತ್ತರ ಬಡಾವಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉತ್ತರ ಬಡಾವಣೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 2016ರಲ್ಲಿ ಸಿದ್ದಗಂಗಾ ಮಠದಲ್ಲಿ ನಡೆದ ರಾಜ್ಯಮಟ್ಟದ ಕಲೋತ್ಸವದಲ್ಲಿ ಪ್ರಥಮ ಬಹುಮಾನ ಪಡೆದ ನಾಟಕ, ಅದೇ ವರ್ಷ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿಯೂ ಪ್ರಥಮ ಸ್ಥಾನ ಪಡೆಯಿತು, ತೀರ್ಪು ಎಲ್ಲರೂ ಒಪ್ಪಿಕೊಳ್ಳುವಂತಿರಬೇಕು ಎಂದು ಸಲಹೆ ನೀಡಿದರು.
ನೀರಿಗೆ ಬಣ್ಣವಿಲ್ಲ, ಆಕಾರವಿಲ್ಲ, ಯಾವ ಪಾತ್ರೆಗೆ ಹಾಕಿದರೂ ಅದರ ಬಣ್ಣ ಮತ್ತು ಆಕಾರ ಪಡೆದುಕೊಳ್ಳುತ್ತದೆ, ಮಕ್ಕಳ ಮನಸ್ಸು ನೀರಿನ ರೀತಿ, ಅವರನ್ನು ತಿದ್ದಿ, ತೀಡಿ ಒಳ್ಳೆಯ ಬಣ್ಣ, ಆಕಾರ ನೀಡುವುದು ಶಿಕ್ಷಕರ ಗುರುತರ ಜವಾಬ್ದಾರಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವುದು ನಿಜವಾದ ಶಿಕ್ಷಕನ ಕರ್ತವ್ಯ, ಈ ನಿಟ್ಟಿನಲ್ಲಿ ಶಿಕ್ಷಕರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ವರೆಗೆ ನಡೆಯುವ ಕಾರ್ಯಕ್ರಮ, ಹಾಗಾಗಿ ಮಕ್ಕಳಲ್ಲಿನ ಸುಪ್ತ ಪ್ರತಿಭೆಗೆ ವೇದಿಕೆ ನೀಡಿದರೆ ನಿಮ್ಮ ಶಾಲೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಶಕ್ತಿ ಮೀರಿ ಪ್ರಯತ್ನಿಸುವಂತೆ ಡಿಡಿಪಿಐ (ಅಭಿವೃದ್ಧಿ) ಮಂಜುನಾಥ್ ಸಲಹೆ ನೀಡಿದರು.
ಉತ್ತರ ಬಡಾವಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಡಿ.ಎಸ್.ಶಿವಸ್ವಾಮಿ ಮಾತನಾಡಿ, ಉತ್ತರ ಬಡಾವಣೆ ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರ ಸಭೆಯ ತೀರ್ಮಾನದಂತೆ ನಮ್ಮ ಶಾಲೆಯಲ್ಲಿ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಆಯೋಜಿಸಲಾಗಿದೆ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ವೇದಿಕೆ, ಸರಕಾರ ಮತ್ತು ಇಲಾಖೆಯ ಸೂಕ್ತ ಮಾರ್ಗದರ್ಶನದೊಂದಿಗೆ ಕ್ಲಸ್ಟರ್ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಇಲ್ಲಿನ ಪ್ರತಿಭೆಗಳು ತಾಲೂಕು, ಜಿಲ್ಲೆ, ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ತೀರ್ಪುಗಾರರು ತಮ್ಮ ತೀರ್ಪು ನೀಡಿ, ಮಕ್ಕಳ ಪ್ರತಿಭೆ ಅರಳುವಂತೆ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಬಡಾವಣೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಟಿ.ಓಬಳಯ್ಯ ಮಾತನಾಡಿ, ಪ್ರತಿಭಾ ಕಾರಂಜಿ, ಕಲೋತ್ಸವಗಳಲ್ಲಿ ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಕೆಲಸ ಆಗಬೇಕು, ನಿಷ್ಪಕ್ಷಪಾತ ತನಿಖೆಯಿಂದ ಮಕ್ಕಳು ಮನಸ್ಸು ಬೆಳಗುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕ ನಂಜುಂಡಯ್ಯ, ರಂಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ.ತಿಮ್ಮೇಗೌಡ, ಪದವಿಧರ ಮುಖ್ಯ ಶಿಕ್ಷಕ ಡಿ.ಎಸ್.ಶಿವಸ್ವಾಮಿ, ಕಾಳಿದಾಸ ಪದವಿ ಪೂರ್ವ ಕಾಲೇಜಿ ಉಪ ಪ್ರಾಂಶುಪಾಲ ಚಂದ್ರಶೇಖರ್, ಸಿಆರ್ಪಿ ಸೈಯದ್ ಮೆಹಬೂಬ್ ಷಾಪ, ಶಿಕ್ಷಕಿ ಕೆ.ಸಿ.ಯಮುನಾ ಇತರರು ಇದ್ದರು.
ಉತ್ತರ ಬಡಾವಣೆ ಕ್ಲಸ್ಟರ್ ಗೆ ಸಂಬಂಧಿಸಿದ ಎಲ್ಲಾ ಖಾಸಗಿ, ಅನುದಾನಿತ ಮತ್ತು ಸರಕಾರಿ ಶಾಲೆಗಳ ನೂರಾರು ಮಕ್ಕಳು ರಾಷ್ಟ್ರ ನಾಯಕರು, ಪೌರಾಣಿಕ ಪಾತ್ರಗಳು, ಐತಿಹಾಸಿಕ ಪುರುಷರ ವೇಷ ಭೂಷಣಗಳನ್ನು ತೊಟ್ಟು ಅಭಿನಯ ಮಾಡಿದರು, ಜಾನಪದ ಗೀತೆಗಳಿಗೆ ಮಕ್ಕಳು ವಿವಿಧ ವಸ್ತ್ರಾಂಲಕಾರದೊಂದಿಗೆ ಹೆಜ್ಜೆ ಹಾಕಿ ಮನಸೂರೆಗೊಂಡರು.
Comments are closed.