ಸರ್ಕಾರಿ ಭೂಮಿ ಉಳಿಸಲು ಕ್ರಮ ಕೈಗೊಳ್ಳಿ

ಅಧಿಕಾರಿಗಳಿಗೆ ಲೋಕಾಯುಕ್ತ ಅಧೀಕ್ಷಕರ ಕಟ್ಟುನಿಟ್ಟಿನ ಸೂಚನೆ

10

Get real time updates directly on you device, subscribe now.


ಕುಣಿಗಲ್: ಸರ್ಕಾರಿ ಭೂಮಿ ಉಳಿಸುವ ನಿಟ್ಟಿನಲ್ಲಿ ವಿನಾ ಕಾರಣ ವಿಳಂಬ ಬೇಡ, ಭೂಮಿ ಅತಿಕ್ರಮಿಸಿದವರ ಮೇಲೆ ಕ್ರಮ ಜರುಗಿಸಿ, ಸರ್ಕಾರಿ ಭೂಮಿ ಸಂರಕ್ಷಣೆ ಮಾಡುವಂತೆ ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ ಹೇಳಿದರು.
ಬುಧವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಸಾರ್ವಜನಿಕ ಕುಂದುಕೊರತೆ, ಅಹವಾಲು ಸ್ವೀಕಾರ ಸಭೆಯಲ್ಲಿ ಪುರಸಭೆ ವ್ಯಾಪ್ತಿಯ ಸರ್ವೇ ನಂ.17 ಕ್ಕೆ ಹೊಂದಿಕೊಂಡಂತೆ 32 ಗುಂಟೆ ಬ ಖರಾಬ್ ಜಾಗವಿದ್ದು, ಬ ಖರಾಬ್ ಜಾಗಕ್ಕೂ ಪುರಸಭೆಯಲ್ಲಿ ಖಾತೆ ಮಾಡಲಾಗಿದೆ, ಸರ್ಕಾರಿ ಭೂಮಿ ರಕ್ಷಣೆ ಮಾಡಿಲ್ಲ, ತಹಶೀಲ್ದಾರ್ ಕ್ರಮ ವಹಿಸಿಲ್ಲ ಎಂದು ದಿನೇಶ್ ಎಂಬುವರು ಅರ್ಜಿ ನೀಡಿದ್ದು, ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಈ ಹಿಂದೆ ಖಾತೆ ಮಾಡಲಾಗಿದೆ, ಖಾತೆ ವಜಾ ಮಾಡಲು ಪ್ರಕರಣ ಉಪ ವಿಭಾಗಾಧಿಕಾರಿ ಹಂತದಲ್ಲಿದೆ ಎಂದರು.
ಬ ಖರಾಬ್ ಜಾಗ ರಕ್ಷಣೆ ತಹಶೀಲ್ದಾರ್ ಮಾಡಬೇಕಿದ್ದು ಕ್ರಮ ವಹಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದಾಗ ತಹಶೀಲ್ದಾರ್ ರಶ್ಮಿ ಸರ್ಕಾರಿ ಭೂಮಿ ರಕ್ಷಣೆ ನಿಟ್ಟಿನಲ್ಲಿ ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಜರುಗಿಸುವುದಾಗಿ ಹೇಳಿದ್ದು, ಇದಕ್ಕೆ ಆಕ್ಷೇಪಿಸಿದ ಅಧೀಕ್ಷಕರು, ಸರ್ಕಾರಿ ಭೂಮಿ ರಕ್ಷಣೆ ಮಾಡಬೇಕು, ಅತಿಕ್ರಮಣ ಮಾಡಿರುವವರ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಚಾಕೇನಹಳ್ಳಿ ಗ್ರಾಮದಲ್ಲಿ ಭೂಮಿ ಅತಿಕ್ರಮಣವಾಗಿದ್ದರೂ ಸರ್ವೇಯರ್, ರಾಜಸ್ವ ನೀರಿಕ್ಷಕರು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಸರ್ವೇಯರ್ ತಪ್ಪು ಮಾಹಿತಿ ನೀಡಲು ಮುಂದಾದಾಗ ತರಾಟೆಗೆ ತೆಗೆದುಕೊಂಡ ಅಧೀಕ್ಷಕರು ರೈತರಿಗೆ ಸಮರ್ಪಕ ನ್ಯಾಯ ದೊರಕಿಸಿ ಕೊಡಬೇಕು, ಅನಗತ್ಯ ತೊಂದರೆ ಮಾಡಬಾರದು ಇನ್ನೊಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸಬೇಕೆಂದರು.
ಚಿಕ್ಕಮಾವತ್ತೂರು ಗ್ರಾಮದ ಸೊಬಗಯ್ಯ, ಗ್ರಾಮದಲ್ಲಿ 2200ಎಕರೆ ಬೆಟ್ಟ ಇದ್ದು ಸರ್ಕಾರಿ ಭೂಮಿಯಾಗಿದೆ, 1000 ಎಕರೆ ಹಂಚಿಕೆಯಾಗಿ ಉಳಿಕೆ 1200ಎಕರೆ ದಿನೆದಿನೆ ಒತ್ತುವರಿಯಾಗುತ್ತಿದೆ, ಗ್ರಾಮ ಆಡಳಿತಾಧಿಕಾರಿ ವಸಂತ, ಹಲವಾರು ವರ್ಷದಿಂದ ಬೀಡು ಬಿಟ್ಟಿದ್ದು ಸರ್ಕಾರಿ ಜಮೀನು ಒತ್ತುವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು.

ತಹಶೀಲ್ದಾರ್ ಈ ಬಗ್ಗೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಕ್ರಮ ವಹಿಸಿ ವರದಿ ನೀಡುವಂತೆ ಅಧೀಕ್ಷಕ ಸೂಚಿಸಿದರು.
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಖಾಸಗಿ ವ್ಯಕ್ತಿಗಳು ದೇವಾಲಯಕ್ಕೆ ಬರುವ ಹಣ ಪೋಲು ಮಾಡುತ್ತಿದ್ದಾರೆ ಎಂದು ಗಂಗರಂಗಯ್ಯ ದೂರಿದರೆ, ವರದರಾಜು ಅನುವಂಶಿಕ ಅರ್ಚಕರನ್ನು ಬಿಟ್ಟು ಯಾರ್ಯಾರೋ ಪೂಜೆ ಮಾಡಲು ಬಂದು ದೇವಾಲಯ ಹಣ ಕೊಳ್ಳೆ ಹೊಡೆಯುತ್ತಿದ್ದಾರೆಂದು ದೂರಿದ್ದು ಈ ನಿಟ್ಟಿನಲ್ಲಿ ಮುಜರಾಯಿ ತಹಶೀಲ್ದಾರ್ ಗೆ ಕ್ರಮಕ್ಕೆ ಸೂಚನೆ ನೀಡುವುದಾಗಿ ಹೇಳಿದರು.

ಭಕ್ತರಹಳ್ಳಿ, ಯಡಿಯೂರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಹಲವು ದೂರು ಬಂದಿದ್ದು ಅವುಗಳು ಒಂದು ತಿಂಗಳೊಳಗೆ ಬಗೆಹರಿಸುವಂತೆ ಸೂಚಿಸಿದರು.
ಬೋರಸಂದ್ರ ಗ್ರಾಮದ ನೇತ್ರಾವತಿ, ಮನೆ ಮುಂದಿನ ಕೆಲವರು ರಸ್ತೆ ಒತ್ತುವರಿ ಮಾಡಿಕೊಂಡು ಓಡಾಡಲು ತೊಂದರೆ ಮಾಡುತ್ತಿದ್ದಾರೆಂದು ದೂರು ಸಲ್ಲಿಸಿದ್ದು, ಸ್ಥಳದಲ್ಲಿದ್ದ ಸಿಪಿಐ ನವೀನ್ ಗೌಡರಿಗೆ ಈಬಗ್ಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪಿಡಿಒಗಳು ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಹಾರ್ದವಾಗಿ ವರ್ತಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಿ

ಅಲೆದಾಡಿಸಬಾರದು ಎಂದು ಸೂಚನೆ ನೀಡಿದರು.
ಲೋಕಾ ಡಿವೈಎಸ್ಪಿ ಉಮಾಶಂಕರ್, ತಹಶೀಲ್ದಾರ್ ರಶ್ಮಿ, ಇಒ ನಾರಾಯಣ ಸೇರಿದಂತೆ ಲೋಕಾಯುಕ್ತ ನಿರೀಕ್ಷಕರು ಹಾಜರಿದ್ದರು, 40 ಅರ್ಜಿಗಳು ಸಲ್ಲಿಕೆಯಾಗಿದ್ದು ಐದು ಅರ್ಜಿಗಳಿಗೆ ಸ್ಥಳದಲ್ಲೆ ಪರಿಹಾರ ನೀಡಲಾಯಿತು.

Get real time updates directly on you device, subscribe now.

Comments are closed.

error: Content is protected !!