ಜನರ ಜಮೀನುಗಳ ದಾಖಲೆ ಸರಿಪಡಿಸಿಕೊಡಿ

ಜಮೀನುಗಳ ಖಾತೆ ಪಹಣಿ ತಿದ್ದುಪಡಿ ಮಾಡಿ: ಸಚಿವ ಕೆಎನ್ಆರ್

10

Get real time updates directly on you device, subscribe now.


ಮಧುಗಿರಿ: ತಲೆ ತಲಾಂತರಗಳಿಂದ ತಮ್ಮ ಪೂರ್ವಜರ ಹೆಸರಿನಲ್ಲಿ ಇರುವಂತಹ ಜಮೀನುಗಳ ಖಾತೆ ಪಹಣಿ ತಿದ್ದು ಪಡಿ ಮಾಡಿಸಿ ಕೊಳ್ಳುವ ಜವಾಬ್ದಾರಿ ನಿಮ್ಮದ್ದಾಗಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಕರೆ ನೀಡಿದರು.
ಐಡಿ ಹೋಬಳಿಯ ಬ್ರಹ್ಮಸಂದ್ರ ಗ್ರಾಮ ಪಂಚಾಯತಿ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತಿಯ ಸಹಯೋಗದಲ್ಲಿ ಜನಸ್ಪಂದನಾ ಹಾಗೂ ಖಾತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಭೂಮಿಯ ಬೆಲೆ ಕಡಿಮೆ ಇತ್ತು, ಆದರೆ ಇಂದು ಅದೇ ಭೂಮಿಯ ಬೆಲೆ ಗಗನಕ್ಕೇರಿದೆ, ಆದರೆ ಇನ್ನೂ ಕೆಲವರು ತಮ್ಮ ಜಮೀನುಗಳ ದಾಖಲೆಗಳನ್ನು ಸರಿಪಡಿಸಿಕೊಂಡಿಲ್ಲ, ಆ ಜವಾಬ್ದಾರಿ ನಿಮ್ಮದ್ದು ಹಾಗೂ ಸರ್ಕಾರದ್ದು ಆಗಿದೆ, ತಾಲೂಕಿನಲ್ಲಿನ ಮೂರು ತಲೆ ಮಾರುಗಳಿಂದಲೂ ಜಮೀನುಗಳ ಖಾತೆ ಪಹಣಿ ಸರಿಪಡಿಸಿಕೊಂಡಿಲ್ಲ, ಆದಷ್ಟು ಬೇಗ ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಎಂದರು.

ಸರ್ಕಾರ ನೀಡುವ ಮಾಸಾಶನಗಳಿಂದ ಯಾರೂ ವಂಚಿತರಾಗಬಾರದು , ಶುದ್ಧ ನೀರಿನ ಘಟಕಗಳನ್ನು ಹದಿನೈದು ದಿನಗಳೊಳಗೆ ಸರಿಪಡಿಸ ಬೇಕು, ಗ್ರಾಮದ ಜನರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗಾಗಿ ಹೋಗುತ್ತಿದ್ದು ಅವರ ಬೇಡಿಕೆಯಂತೆ ಗ್ರಾಮ ಸರ್ಕಾರಿ ಬಸ್ ವ್ಯವಸ್ಥೆ ಮಾಡಿ ಕೊಡಲಾಗುವುದು ಎಂದರು.
ಈಗಾಗಲೇ ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದ್ದು ತಾಲೂಕಿನಲ್ಲಿ ಸುಮಾರು 5 ಸಾವಿರ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಬಹುದಾಗಿದೆ, ರಾಯದುರ್ಗಾ, ತುಮಕೂರು ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ರೈಲ್ವೆ ಇಲಾಖೆಗೆ ಇನ್ನೂ ಕೆಲವು ದಿನಗಳಲ್ಲಿ ಹಸ್ತಾಂತರಿಸಿ ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು, ಮುಂದಿನ ಮಳೆಗಾಲಕ್ಕೆ ಹಾಗೂ ಏಪ್ರಿಲ್ ಮಾಹೆಯಲ್ಲಿ ತಾಲೂಕಿನ ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯ ನೀರನ್ನು ಹರಿಸಲಾಗುವುದು, ಇದಕ್ಕಾಗಿ 6 ಸಾವಿರ ಕೋಟಿ ರೂ ವೆಚ್ಚವಾಗಲಿದೆ, ಡಿಸಿ 4 ಮತ್ತು ಡಿಸಿ 6 ಗೇಟ್ ಗಳ ಮೂಲಕ ಮಾರಿ ಕಣಿವೆಗೆ ನೀರು ಹರಿಸಲಾಗುತ್ತಿದೆ, ಎತ್ತಿನಹೊಳೆ ಯೋಜನೆಯಲ್ಲಿ 15 ಸಾವಿರ ಹೆಚ್ ಪಿ ಸಾಮರ್ಥ್ಯದ ಕಂಪ್ಯೂಟರ್ ನಿಯಂತ್ರಣದ ಮೋಟಾರ್ ಗಳನ್ನು ನೀರೆತ್ತಲು ಬಳಸಲಾಗುತ್ತಿದೆ, ನೀರಾವರಿ ತಜ್ಞ ಜಿ.ಎಸ್ ಪರಮಶಿವಯ್ಯ ನವರ ಪ್ರಯತ್ನದಿಂದಾಗಿ ಎತ್ತಿನ ಹೊಳೆ ನೀರು ತಾಲೂಕಿಗೆ ಹರಿಯಲು ಸಹಕಾರಿಯಾಗಿದ್ದು ಅವರನ್ನು ಈ ಸಂದರ್ಭದಲ್ಲಿ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮುಂದಿನ ಪೀಳಿಗೆಗೆ ಪ್ರಕೃತಿ ದತ್ತವಾಗಿರುವ ಕೊಡುಗೆ ನೀಡಬೇಕು, ಇಂದು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವವಿದ್ದು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು, ವಿದ್ಯಾಭ್ಯಾಸದಿಂದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿಸುವ ಪೋಷಕರನ್ನು ಪೊಲೀಸ್ ಠಾಣೆಯಲ್ಲಿ ಎರಡು ದಿನ ಇರಿಸುವಂತಹ ಕಾನೂನು ಜಾರಿ ಮಾಡಬೇಕು ಎಂದು ತಿಳಿಸಿದರು.
ಹೈನುಗಾರಿಕೆಯಿಂದ ರೈತರಲ್ಲಿ ಆರ್ಥಿಕ ಶಕ್ತಿ ಹೆಚ್ಚಾಗಿದೆ, ಉತ್ಪಾದಕ ಸಂಘಗಳಲ್ಲಿ ಇತ್ತೀಚೆಗೆ ಆಳವಡಿಸಲಾಗಿರುವ ಎನ್ ಡಿಡಿಪಿ ತಂತ್ರಾಂಶಕ್ಕೆ ಅಳವಡಿಕೆಗೆ ಮಂಡ್ಯದಲ್ಲಿ ಮೊದಲು ವಿರೋಧ ವ್ಯಕ್ತವಾಯಿತು, ನಂತರ ಇದೇ ತಂತ್ರಜ್ಞಾನ ವಿರಬೇಕೆಂಬ ಮಾತುಗಳು ರೈತರಿಂದ ಕೇಳಿ ಬರುತ್ತಿವೆ, ತಂತ್ರಜ್ಞಾನ ಅಳವಡಿಕೆಯಿಂದ ಹಾಲು ಉತ್ಪಾದಕರಿಗೆ ಅನೂಕೂಲವಿದ್ದು ಮುಂದಿನ ದಿನಗಳಲ್ಲಿ ನೇರವಾಗಿ ಫಲಾನುಭವಿ ಖಾತೆಗೆ ಹಾಲು ಹಾಕಿದ ದಿನವೇ ಹಣ ವರ್ಗಾವಣೆ ಮಾಡಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದರು.

ಜಿಪಂ ಸಿಇಓ ಪ್ರಭು ಜಿ ಮಾತನಾಡಿ ಪ್ರತಿ ಹದಿನೈದು ದಿಗಳಿಗೊಮ್ಮೆ ಸರಣಿ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಆಡಳಿತಕ್ಕೆ ಹೆಚ್ಚು ವೇಗ ನೀಡಲಾಗುತ್ತಿದೆ, ಎನ್ ಆರ್ ಇಜಿ ಕಾಮಗಾರಿಯಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ 630 ಕೋಟಿ ರೂ.ಗಳಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಬದಂತಹ ಅರ್ಜಿಗಳ ಸಮಸ್ಯೆ ಬಗೆಹರಿಸ ಬೇಕು, ಅಲ್ಲಿ ಬಗೆಹರಿಯಲಿಲ್ಲವೆಂದರೆ ಜಿಲ್ಲಾ ಮಟ್ಟದಲ್ಲಿ ಬಗೆಹರಿಸಲಾಗುವುದು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ.ವಿ, ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ತಹಸೀಲ್ದಾರ್ ಶಿರಾನ್ ತಾಜ್, ತಾಪಂ ಇಓ ಲಕ್ಷ್ಮಣ್ , ಡಿವೈಎಸ್ಪಿ ರಾಮಚಂದ್ರಪ್ಪ , ಗ್ರಾಪಂ ಅಧ್ಯಕ್ಷೆ ಬಾಲಕ್ಕ ಬಡೀಗೇರಪ್ಪ , ಉಪಾಧ್ಯಕ್ಷ ಚಿತ್ತಯ್ಯ
ಮಾಜಿ ಜಿಪಂ ಸದಸ್ಯ ಜಿ.ಜೆ.ರಾಜಣ್ಣ , ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನನಾಯ್ಕ , ರಾಜು.ಕೆ.ಎ, ಕೃಷ್ಣ ಮೂರ್ತಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!