ಕುಣಿಗಲ್: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ಬಜರಂಗದಳ ಹಿಂದೂ ಮಹಾ ಗಣಪತಿಯ ಪೆಂಡಾಲ್ ನಲ್ಲಿ ಸಿಹಿ, ತಂಪು ಪಾನೀಯ ವಿತರಿಸಿದರೆ, ಮುಸ್ಲಿಂ ಮುಖಂಡರು ಗಣೇಶಮೂರ್ತಿಗೆ ಹೂಮಾಲೆ ಅರ್ಪಿಸುವ ಮೂಲಕ ಕೋಮು ಸೌಹಾರ್ದಕ್ಕೆ ಸಾಕ್ಷಿಯಾದರು.
ಈದ್ ಮಿಲಾದ್ ಅಂಗವಾಗಿ ಪಟ್ಟಣದ ವಿವಿಧ ಮುಸ್ಲಿಂ ಬಡಾವಣೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದರಂತೆ ಕೋಟೆ ಪ್ರದೇಶದಿಂದ ಮದ್ದೂರು ರಸ್ತೆ, ಗುಜ್ಜಾರಿ ಮೊಹಲ್ಲಾಕ್ಕೆ ಈದ್ಮಿಲಾದ್ ಆಚರಣೆಯ ಮೆರವಣಿಗೆ ನಡೆಸಲಾಯಿತು, ತಮ್ಮ ಧರ್ಮ ಧ್ವಜದ ಜೊತೆ ರಾಷ್ಟ್ರ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ತೆರಳಿದರು.
ಹುಚ್ಚಮಾಸ್ತಿಗೌಡ ವೃತ್ತದ ಬಳಿ ಬಜರಂಗ ದಳದ ವತಿಯಿಂದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಿದ್ದು, ಈ ಮಾರ್ಗವಾಗಿ ಬಂದ ಈದ್ ಮಿಲಾದ್ ಮೆರವಣಿಗೆಯಲ್ಲಿನ ಮುಸ್ಲಿಂ ಬಾಂಧವರಿಗೆ ಬಜರಂಗದಳದ ಕಾರ್ಯಕರ್ತರು ತಂಪು ಪಾನೀಯ, ಸಿಹಿ ವಿತರಿಸಿದರು.
ನಂತರ ಮುಸ್ಲಿಂ ಸಮಾಜದ ಕೆಲ ಮುಖಂಡರು ಪೆಂಡಾಲ್ ಗೆ ಭೇಟಿ ನೀಡಿ ಗಣೇಶ ಮೂರ್ತಿಗೆ ಹೂವಿನ ಹಾರ ಹಾಕಿ ನಮಿಸಿದರು, ಈ ವೇಳೆ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ಹಮೀದ್, ಪಟ್ಟಣದಲ್ಲಿ ಎರಡೂ ಸಮುದಾಯದವರ ಈ ನಡೆ ಕೋಮು ಸೌಹಾರ್ದಕ್ಕೆ ಪೂರಕವಾಗಿದೆ, ಮುಂದೆಯೂ ಎರಡು ಸಮುದಾಯದ ನಡುವೆ ಇದೆ ಬಾಂಧವ್ಯ ಮುಂದುವರೆಯಲಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ರೆಹಮಾನ್ ಶರೀಫ್, ಜಾತ್ಯಾತೀತ ಮನೋಭಾವ ಹಾಗೂ ಜಾತ್ಯಾತೀತ ತತ್ವ ಎತ್ತಿಹಿಡಿಯಲು ಈ ಘಟನೆ ಮಹತ್ತರವಾಗಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಸಮೀವುಲ್ಲಾ, ಜಾತಿ, ಧರ್ಮದ ಹೆಸರಲ್ಲಿ ನಾವು ಬೇರೆಯಾಗಬಾರದು, ನಾವೆಲ್ಲ ಭಾರತೀಯರು ಎಂಬ ತತ್ವದ ಅಡಿಯಲ್ಲಿ ಮುನ್ನಡೆದಾಗ ದೇಶವೂ ಸದೃಢವಾಗುತ್ತದೆ, ಗಣೇಶ ಉತ್ಸವ, ಮಿಲಾದ್ ಹಬ್ಬಾಚರಣೆ ಎರಡೂ ಸಮುದಾಯದ ನಡುವೆ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಹಿಂದೂ ಮುಖಂಡ ಸತೀಶ್ ಮಾತನಾಡಿ ರಾಷ್ಟ್ರೀಯತೆ ವೃದ್ಧಿಸುವ ಸಲುವಾಗಿ ಎಲ್ಲಾ ಭಾರತೀಯರು ಒಂದಾಗಬೇಕೆಂದರು.
ಎರಡೂ ಸಮುದಾಯದ ಮುಖಂಡರನ್ನು ಅಭಿನಂದಿಸಿದ ಅಡಿಷನಲ್ ಎಸ್ಪಿ ಅಬ್ದುಲ್ ಖಾದರ್, ಇಂದು ಈ ಘಟನೆ ತಮ್ಮ ಸೇವಾ ಅವಧಿಯಲ್ಲೆ ನೆನಪಿಡುವಂತ ಘಟನೆಯಾಗಿದೆ, ಇಂತಹ ಕೋಮು ಸೌಹಾರ್ದ ವೃದ್ಧಿಸುವ ಕಾರ್ಯಕ್ರಮ ಇನ್ನು ಹೆಚ್ಚು ಹೆಚ್ಚು ನಡೆಯಬೇಕು, ಕುಣಿಗಲ್ ಪಟ್ಟಣದಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿ ಎಂದರು.
ತಾಲೂಕು ಬಜರಂಗದಳದ ಪ್ರಮುಖ ಗಿರೀಶ್ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.
Comments are closed.