ತುಮಕೂರು: ವಿದ್ಯಾರ್ಥಿಗಳ ದೆಸೆಯಿಂದಲೇ ನಾವುಗಳು ಶಿಸ್ತು ಪಾಲನೆ ಅಳವಡಿಸಿಕೊಳ್ಳಬೇಕು, ಈಗಿನಿಂದಲೇ ಗುರಿ ಇಟ್ಟುಕೊಂಡು ಕೆಲಸ ಮಾಡುವ ಅಭ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕು, ನಮ್ಮ ಜೀವನದಲ್ಲಿ ನಾವು ಏನಾದರೂ ಸಾಧನೆ ಮಾಡಬೇಕಾದರೆ ನಮ್ಮ ಮಾರ್ಗದರ್ಶಕರು ಪ್ರಮುಖ ಸ್ಥಾನ ವಹಿಸುತ್ತಾರೆ, ವಿದ್ಯಾರ್ಥಿ ದೆಸೆಯಲ್ಲಿ ನಮಗೆ ಹಲವಾರು ಆಕರ್ಷಣೆ ಇರುತ್ತವೆ, ಇವೆಲ್ಲವನ್ನು ತ್ಯಜಿಸಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ, ಮುಂದೆ ಗುರಿ ಹಾಗೂ ಹಿಂದೆ ಗುರುವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ತುಮಕೂರಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ತಿಳಿಸಿದರು.
ನಗರದ ಅನನ್ಯ ಇನ್ಸ್ ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ವತಿಯಿಂದ ಪ್ರಥಮ ವರ್ಷದ ಬಿಕಾಂ ಹಾಗೂ ಬಿಸಿಎ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಮತ್ತು ಓರಿಯೇಟೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶ ಇಡೀ ಪ್ರಪಂಚಕ್ಕೆ ಸ್ವಾಮಿ ವಿವೇಕಾನಂದರು ಹಾಗೂ ಶ್ರೀರಾಮಕೃಷ್ಣ ಪರಮ ಹಂಸರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದರೆ ಗುರಿ ಸಾಧಿಸುವುದು ಸುಲಭ ಸಾಧ್ಯವಾಗುತ್ತದೆ, ಸಾಧನೆ ಎಂಬುದು ಯಾರೊಬ್ಬರ ಸ್ವತ್ತಲ್ಲ, ದೀರ್ಘ ಕಾಲದ ಪರಿಶ್ರಮವಿದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಗಿಡವಾಗಿ ಬಗ್ಗದ್ದು ಮರವಾದ ಮೇಲೆ ಬಗ್ಗುವುದಿಲ್ಲ ಎಂಬಂತೆ ವಿದ್ಯಾರ್ಥಿಗಳ ದೆಸೆಯಿಂದಲೇ ನಾವು ಸನ್ಮಾಮಾರ್ಗದಲ್ಲಿ ನಡೆಯದೆ ಇದ್ದರೆ ಮುಂದಿನ ಜೀವನ ಬಹಳ ವಿಷಮಯವಾಗಿರುತ್ತದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಶ್ರೀಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದಲೇಬೇಕು, ಇಡೀ ಪ್ರಪಂಚವೇ ಸ್ವಾಮಿ ವಿವೇಕಾನಂದರ ಸಾಧನೆಯನ್ನು ಕೊಂಡಾಡುತ್ತದೆ, ಅವರು ಭಾರತದ ಯುವಕರ ಪ್ರತಿನಿಧಿಯಾಗಿ ಕಾಣುತ್ತಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ತುಮಕೂರು ವಿಶ್ವ ವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಪಿ.ಪರಮಶಿವಯ್ಯ ಮಾತನಾಡಿ, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಈಗ ಕೆಲಸ ಸೌಲಭ್ಯ ಬಹಳಷ್ಟಿದೆ, ವಿದ್ಯಾರ್ಥಿಗಳು ಈಗ ಇಲ್ಲಿಂದಲೇ ಸ್ಕಿಲ್ ಡೆವಲಪ್ಮೆಂಟ್ ಮಾಡಿಕೊಂಡಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭವಾಗುತ್ತದೆ, ಅನನ್ಯ ಸಂಸ್ಥೆಯೂ ಒಂದು ಉತ್ತಮ ಸಂಸ್ಥೆಯಾಗಿದ್ದು, ಇಲ್ಲಿ ವಿದ್ಯಾಭ್ಯಾಸ ಪಡೆದು ಬಹುತೇಕ ಎಲ್ಲಾ ವಿದ್ಯಾರ್ಥಿಗಳಿಗೂ ಕೆಲಸ ಖಚಿತವಾಗಿ ಸಿಗುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ದೇಶದ ಅಭಿವೃದ್ಧಿಗೆ ಬೆಂಗಳೂರು ಹಾಗೂ ಕರ್ನಾಟಕದೇ ಸಿಂಹ ಪಾಲು ಎಂದು ಭಾವಿಸಿದರೆ ತಪ್ಪಾಗಲಾಗದು, ಸ್ಟಾಟ್ ಆಫ್ ಗಳ ಹೃದಯ ಭಾಗವೇ ಬೆಂಗಳೂರು, ವಿದ್ಯಾರ್ಥಿಗಳು ಇದೇ ದಿಸೆಯಲ್ಲಿ ಯೋಚನೆ ಮಾಡಿ ತಮ್ಮ ಸ್ವಂತ ಉದ್ಯಮಿ ಸ್ಥಾಪಿಸುವ ಮೂಲಕ ಪ್ರಗತಿಗೆ ಬೆನ್ನೆಲುಬಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನನ್ಯ ಸಂಸ್ಥೆಯ ಅಧ್ಯಕ್ಷ ಚಾರ್ಟರ್ಡ್ ಅಕೌಂಟೆಂಟ್ ನ ಎಸ್.ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಬೇಕಾಗುವ ಎಲ್ಲಾ ಸವಲತ್ತನ್ನು ಸಂಸ್ಥೆಯೂ ಉಚಿತವಾಗಿ ಒದಗಿಸಿಕೊಡುತ್ತದೆ, ವಿದ್ಯಾರ್ಥಿಗಳು ಕೆಲಸ ಕೊಡುವುದರ ಮೂಲಕ ದೇಶಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು, ವಿದ್ಯಾರ್ಥಿಗಳು ಉದ್ಯಮಪತಿಗಳಾಗಬೇಕು, ಹಳ್ಳಿಗಳನ್ನು ಬಿಟ್ಟು ಹೊರಬರದೆ ಹಳ್ಳಿಗಳಲ್ಲಿಯೇ ತಮ್ಮ ಸ್ವಂತ ಉದ್ಯೋಗ ಸ್ಥಾಪಿಸಿದರೆ, ಆರ್ಥಿಕ ಮೂಲ ವೃದ್ಧಿಯಾಗುತ್ತದೆ ಹಾಗೂ ದೇಶದ ಸಂಪನ್ಮೂಲ ಸರಿಯಾಗಿ ಬಳಕೆಯಾಗುತ್ತದೆ, ಈ ಸಂಪನ್ಮೂಲ ಉಪಯೋಗಿಸಿಕೊಂಡು ಯಾವ ರೀತಿ ಉದ್ಯಮ ನಡೆಸಬೇಕು ಎಂಬುದರ ಸಂಪೂರ್ಣ ವಿವರವಾದ ಕಾರ್ಯಾಗಾರವನ್ನು ನಮ್ಮ ಸಂಸ್ಥೆಯ ವತಿಯಿಂದ ಮಾಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಅನನ್ಯ ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಉಮೇಶ್, ಅನನ್ಯ ಸಂಸ್ಥೆಯ ಟ್ರಸ್ಟಿ ಡಾ.ಹೆಚ್.ಹರೀಶ್ ಮತ್ತು ಚಂದ್ರಶೇಖರ್, ತುಮಕೂರಿನ ಖ್ಯಾತ ಮನೋವಿಕಾಸ ತಜ್ಞ ಸಿ.ಸಿ.ಪಾವಟೆ, ಅನನ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ವಿಶ್ವಾಸ್, ಅನನ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಆರ್.ರಘು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.
Comments are closed.