ದಲಿತರ ನಿಂದನೆ- ಮುನಿರತ್ನ ವಿರುದ್ಧ ಕಿಡಿ

ದಲಿತ ಸಂಘಟನೆಯ ಒಕ್ಕೂಟದಿಂದ ಪ್ರತಿಭಟನೆ

6

Get real time updates directly on you device, subscribe now.


ಕುಣಿಗಲ್: ಶಾಸಕ ಮುನಿರತ್ನ ದಲಿತ ಸಮುದಾಯ, ಒಕ್ಕಲಿಗರ ಹೆಣ್ಣು ಮಕ್ಕಳನ್ನು ಅಶ್ಲೀಲವಾಗಿ ನಿಂದಿಸಿರುವುದನ್ನು ಖಂಡಿಸಿ ತಾಲೂಕು ದಲಿತ ಸಂಘಟನೆಯ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿಮಂದಿರ ಬಳಿ ಜಮಾವಣೆಗೊಂಡ ವಿವಿಧ ದಲಿತಸಂಘಟನೆ ಮುಖಂಡರು, ಪದಾಧಿಕಾರಿಗಳು ತಾಲೂಕು ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಶಾಸಕರ ಹೇಳಿಕೆ ಖಂಡಿಸಿ ಘೋಷಣೆ ಕೂಗಿದರು.
ತಾಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುಖಂಡ ಎಸ್.ಆರ್.ಚಿಕ್ಕಣ್ಣ, ವ್ಯಕ್ತಿ ವ್ಯಕ್ತಿಗೆ ಗೌರವ ಕೊಡಬೇಕು, ಆಗಲೆ ಮಾನವೀಯ ಮೌಲ್ಯಗಳು ಉಳಿಯುತ್ತವೆ, ಸಾವಿರಾರು ಮಂದಿ ಎಲ್ಲಾ ವರ್ಗದ ಜನಾಂಗದ ಮತಗಳಿಂದ ಆಯ್ಕೆಯಾದ ಒಬ್ಬ ಜನಪ್ರತಿನಿಧಿ ತನ್ನ ಸ್ಥಾನ ಮರೆತು ಒಂದು ಜನಾಂಗವನ್ನು ಅಶ್ಲೀಲವಾಗಿ ನಿಂದಿಸಿ ಮಾತನಾಡಿ ರುವುದು ಖಂಡನೀಯ, ಇಂತಹ ಕೃತ್ಯ ಯಾವುದೇ ಪಕ್ಷದವರು ಮಾಡಿದ್ದರೂ ಅವರ ವಿರುದ್ಧ ದಲಿತ ಸಂಘಟನೆಗಳು ಪರಿಣಾಮಕಾರಿ ಧ್ವನಿ ಎತ್ತಿ ತಕ್ಕ ಬುದ್ಧಿ ಕಲಿಸುತ್ತೇವೆ, ಜನಾಂಗದ ಜೊತೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲದೆ ಮಾತನಾಡಿರುವುದು ನೋಡಿದರೆ ಆರ್ ಆರ್ ನಗರದ ಶಾಸಕ ಮುನಿರತ್ನ ಶಾಸಕನಾಗಿರಲು ಅರ್ಹರಲ್ಲ ಎಂಬುದು ಮನದಟ್ಟಾಗುತ್ತದೆ, ಇವರನ್ನು ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬೇಕೆಂದು ಆಗ್ರಹಿಸಿದರು.

ಮುಖಂಡ ಶಿವಶಂಕರ್ ಮಾತನಾಡಿ, ಆರ್ ಆರ್ ನಗರದ ಶಾಸಕ ಮುನಿರತ್ನ ಆಡಿರುವ ಮಾತುಗಳು, ಹೆಣ್ಣು ಮಕ್ಕಳ ಬಗ್ಗೆ ಬಳಸಿರುವ ಪದಗಳು ಇಡೀ ಮಾನವ ಕುಲವೇ ತಲೆ ತಗ್ಗಿಸಬೇಕು, ಜನಪ್ರತಿನಿಧಿಯಾದವರ ನಡೆ ನಾಲ್ಕು ಜನಕ್ಕೆ ಮಾದರಿಯಾಗಬೇಕು, ಆದರೆ ಇವರ ವರ್ತನೆ ಜನಪ್ರತಿನಿಧಿ ಯಾಗಲು ಅನರ್ಹವಾದ ವರ್ತನೆಯಾಗಿದೆ, ಶಾಸಕ ಸ್ಥಾನದಲ್ಲಿದ್ದು ಕೊಂಡು ನಡೆಸಿರುವ ಅಮಾನವೀಯ ವರ್ತನೆಗೆ ಅವರು ಶಾಸಕ ಸ್ಥಾನದಲ್ಲಿರಲು ಅನರ್ಹವಾದ ವ್ಯಕ್ತಿ, ಈ ನಿಟ್ಟಿನಲ್ಲಿ ರಾಜ್ಯಪಾಲರು ಕೂಡಲೇ ಕ್ರಮ ಜರುಗಿಸಬೇಕು, ಮುನಿರತ್ನ ಈ ಕಡೆ ಬಂದಲ್ಲಿ ನಮ್ಮ ಜನತೆ ಅವರಿಗೆ ತಕ್ಕ ಪಾಠ ಕಲಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡರಾದ ದಲಿತ ನಾರಾಯಣ, ಬಿ.ಡಿ.ಕುಮಾರ, ರಾಜು, ಕೃಷ್ಣರಾಜು, ರಾಮಕೃಷ್ಣಯ್ಯ, ಶ್ರೀನಿವಾಸ್, ವರದರಾಜು ಇತರರು ಮಾತನಾಡಿದರು, ಮುಖಂಡರಾದ ಮಲ್ಲಿಪಾಳ್ಯ ಶ್ರೀನಿವಾಸ, ರಾಮಲಿಂಗಯ್ಯ, ಕೃಷ್ಣಪ್ಪ, ದೇವರಾಜ, ರಾಮು, ನರಸಿಂಹಮೂರ್ತಿ, ಆನಂದ ಇತರರು ಉಪಸ್ಥಿತರಿದ್ದು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!