ಅರ್ಧಕ್ಕೆ ನಿಂತ ಕಾಮಗಾರಿಯಿಂದ ಅವಾಂತರ- ವಾಹನ ಸವಾರರಿಂದ ಹಿಡಿಶಾಪ

ಹುಳಿಯಾರಿನಲ್ಲಿ ಧೂಳಿನ ಅಬ್ಬರಕ್ಕೆ ಜನ ಕಂಗಾಲು

491

Get real time updates directly on you device, subscribe now.

ಹುಳಿಯಾರು: ಹುಳಿಯಾರು ಪಟ್ಟಣಕ್ಕೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ ನಿಶ್ವಿತ. ಹೊಸದುರ್ಗ, ತಿಪಟೂರು ಕಡೆಯಿಂದ ಬಂದರೂ ಧೂಳಿನ ಸ್ನಾನ ಮಾಡಬೇಕು. ಶಿರಾ, ಚಿಕ್ಕನಾಯಕನಹಳ್ಳಿ ಕಡೆಯಿಂದ ಬಂದರೂ ಧೂಳಿನ ಅಭಿಷೇಕ ಸ್ವೀಕರಿಸಬೇಕು, ಪಟ್ಟಣದ ರಾಮಗೋಪಾಲ್ ಸರ್ಕಲ್ನಲ್ಲಿ ತಿರುಗಾಡಿದರೂ ಧೂಳಿನ ಸಿಂಚನ ಮಾಡಿಸಿಕೊಳ್ಳಬೇಕು.
ಮಂಗಳೂರು ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದ ವಿಸ್ತರಣೆಯ ಕಾಮಗಾರಿಯು ಕಳೆದ 3 ವರ್ಷಗಳಿಂದ ನಡೆಯುತ್ತಿದೆ. ಕುಟುಂತ ನಡೆಯುತ್ತಿರುವ ಕಾಮಗಾರಿಯಿಂದ ಏಳುತ್ತಿರುವ ಧೂಳು ಪಟ್ಟಣಕ್ಕೆ ಬರುವವರಿಗೆ ಕಿರಿಕಿರಿ ಮಾಡುತ್ತಿದೆ. ಜೊತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ. ಪರಿಣಾಮ ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
2017 ಡಿಸೆಂಬರ್ ತಿಂಗಳಿನಲ್ಲಿ 234 ರ ಶಿರಾ ಹುಳಿಯಾರು ಹೆದ್ದಾರಿ ಕಾಮಗಾರಿ ಆರಂಭಗೊಂಡಿತು. ಶಿರಾದಿಂದ ಹುಳಿಯಾರಿನವರೆವಿಗೆ ಭರದಿಂದ ನಡೆದ ಕಾಮಗಾರಿಯು ಹುಳಿಯಾರು ಪ್ರವೇಶಿಸಿದ ಮೇಲೆ ಆಮೆವೇಗ ಪಡೆಯಿತು. 2018 ರ ಅಕ್ಟೋಬರ್ ಮಾಹೆಗೆ ಆರಂಭವಾದ ಹುಳಿಯಾರು ಪಟ್ಟಣದ ಕಾಮಗಾರಿಯು ಇಲ್ಲಿಯವರೆವಿಗೆ ಕೊನೆಗಂಡಿಲ್ಲ. ಕೇವಲ ಮೂರ್ನಾಲ್ಕು ಕಿ.ಮೀ. ರಸ್ತೆ ಮತ್ತು ಚರಂಡಿ ಕಾಮಗಾರಿ ಮುಗಿಸದೆ ನಿರ್ಲಕ್ಷ್ಯಿಸಿರುವ ಪರಿಣಾಮ ಬರೋಬ್ಬರಿ 2 ವರ್ಷಕ್ಕೂ ಹೆಚ್ಚು ಕಾಲ ಸಾರ್ವಜನಿಕರು ನರಕಯಾತನೆ ಅನುಭವಿಸುವಂತ್ತಾಗಿದೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದಂತೂ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದಾದ ಕಿರಿಕಿರಿ ಹೇಳ ತೀರದಾಗಿದೆ. ಗುತ್ತಿಗೆ ಪಡೆದಿರುವ ಡಿಆರ್ಎನ್ ಸಂಸ್ಥೆ ಶಿರಾ ರಸ್ತೆಯ ಎಸ್ಎಲ್ಆರ್ ಬಂಕ್ ಬಳಿ ಹಾಗೂ ತಿಪಟೂರು ರಸ್ತೆಯ ಒಣಕಾಲುವೆ ಬಳಿ ಸರ್ಕಲ್ ನಿರ್ಮಾಣಕ್ಕೆ ಹಾಗೂ ರಾಂಗೋಪಾಲ್ ಸರ್ಕಲ್ಬಳಿ ಸೇತುವೆ ನಿರ್ಮಾಣಕ್ಕೆ ಡಾಂಬರ್ ರಸ್ತೆಯನ್ನು ಕಿತ್ತು ಜಲ್ಲಿ ಹಾಗೂ ಜಲ್ಲಿಯ ಪುಡಿ ಹಾಕಿ ಹಾಗೆಯೇ ಬಿಟ್ಟಿರುವುದರಿಂದ ಏಳುತ್ತಿರುವ ಧೂಳು ಪ್ರಯಾಣಿಕರ ಗೋಳಿಗೆ ಕಾರಣವಾಗಿದೆ.
ಶಿರಾ, ತುಮಕೂರು, ಹಿರಿಯೂರು, ತಿಪಟೂರು, ಅರಸೀಕೆರೆ, ಹೊಸದುರ್ಗ ಭಾಗಗಳಿಗೆ ಹುಳಿಯಾರು ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ವೇಗವಾಗಿ ಬರುವ ಭಾರವಾದ ಲಾರಿ, ಟಿಪ್ಪರ್, ಬಸ್ ಸೇರಿದಂತೆ ಸಾವಿರಾರು ಕಾರುಗಳು ಚಲಿಸುವುದರಿಂದ ರಸ್ತೆಯಲ್ಲಿ ದೂಳು ಎದ್ದು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ನಿವಾಸಿಗಳು ಹಾಗೂ ಅಕ್ಕಪಕ್ಕದ ವ್ಯಾಪಾರಸ್ಥರಿಗೆ ಸಂಕಟ ಅನುಭವಿಸುವಂತೆ ಆಗಿದೆ. ದ್ವಿಚಕ್ರ ವಾಹನಗಳ ಸವಾರರಿಗೆ ಕಣ್ಣಿನ ತುಂಬಾ ಧೂಳು ತುಂಬಿಕೊಂಡು ಮುಂದೆ ಬರುವ ವಾಹನ ನೋಡಲಾರದ ಹಾಗೂ ಲಾರಿ ಸೇರಿದಂತೆ ಲಾರಿ ವಾಹನಗಳು ಬಂದಾಗ ಕಲ್ಲು ಸಿಡಿದು ಗಾಯವಾಗುವ ನಿದರ್ಶನಗಳೂ ಸಾಕಷ್ಟಿವೆ.
ಧೂಳು ಏಳಬಾರದೆಂದು ರಸ್ತೆಗೆ ಟ್ಯಾಂಕರ್ ಮೂಲಕ ನೀರನ್ನು ಹಾಕುತ್ತಿದ್ದರೂ ಬಿರುಬಿಸಿಲಿಗೆ ಕ್ಷಣಾರ್ಧದಲ್ಲಿ ನೀರು ಆವಿಯಾಗಿ ಮತ್ತೆ ಧೂಳು ಎಳುತ್ತದೆ. ಈ ಧೂಳಿನಿಂದ ಜನರಲ್ಲಿ ಗಂಟಲು ನೋವು, ಉಸಿರಾಟದ ತೊಂದರೆ, ಕಣ್ಣು ನೋವು, ಅಸ್ತಮಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಸೃಷ್ಠಿಯಾಗುವ ಆತಂಕ ಎದುರಾಗಿದೆ. ಅಲ್ಲದೆ ರಸ್ತೆ ಬದಿಯ ವ್ಯಾಪಾರಿಗಳು ಕಂಗಾಲಾಗಿದ್ದು, ಗೂಡಂಗಡಿಗಳು, ಸಣ್ಣ ಹೋಟೆಲ್ ವ್ಯಾಪಾರಸ್ಥರು, ಪಾನಿ ಪೂರಿ, ಎಗ್ ರೈಸ್, ಜ್ಯೂಸ್, ಕಲ್ಲಂಗಡಿ ಸೇರಿದಂತೆ ಅನೇಕ ವ್ಯಾಪಾರಿಗಳು ವ್ಯಾಪಾರ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಬರುವುದರಿಂದ ಮತ್ತು ಕೇಂದ್ರ ವ್ಯಾಪ್ತಿಯಲ್ಲಿ ಬರುವುದರಿಂದ ಸ್ಥಳೀಯ ಜನರು ಕುಂದುಕೊರತೆಗಳನ್ನು ಯಾರಿಗೆ ಸಲ್ಲಿಸಬೇಕು ಎಂದು ತಿಳಿಯದೇ ತೊಳಲಾಡುತ್ತಾರೆ. ಇನ್ನಾದರೂ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಧೂಳಿನಿಂದಾಗುತ್ತಿರುವ ಕಿರಿಕಿರಿಯಿಂದ ಮುಕ್ತಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿನ ಸಂಸದರು, ಸಚಿವರು, ಜನಪ್ರತಿನಿಧಿಗಳು ಸಂಬಂಧಿಸಿದವರ ಗಮನಕ್ಕೆ ತರಬೇಕು ಎಂಬುವುದು ಜನರ ಅಭಿಮತವಾಗಿದೆ.

ಧೂಳಿನಿಂದ ವ್ಯಾಪಾರ ಕಡಿಮೆಯಾಗಿದೆ
ಎಸ್ಎಲ್ಆರ್ ಬಂಕ್ ಬಳಿ ಹೋಟೆಲ್ ನಡೆಸುತ್ತಿದ್ದೇನೆ. ಕಳೆದ ಮೂರ್ನಾಲ್ಕು ತಿಂಗಳಿಂದ ರಸ್ತೆಯಲ್ಲಿ ಏಳುತ್ತಿರುವ ಧೂಳಿನಿಂದ ವ್ಯಾಪಾರ ಇಲ್ಲದಾಗಿದೆ. ಬಸ್, ಲಾರಿ ಬಂದರಂತೂ ಹೋಟೆಲ್ ಒಳಗೆ ಧೂಳು ನುಗ್ಗುತ್ತದೆ. ಪರಿಣಾಮ ತಿಂಡಿ ತಿನ್ನಲು, ಚಹ ಕುಡಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಬೆಳಗ್ಗೆಯಿಂದ ಸಂಜೆಯವರೆವಿಗೂ ಧೂಳು ಕುಡಿದು ಕೆಮ್ಮು, ಗಂಟಲ ಕೆರತ ಸೇರಿದಂತೆ ಅನೇಕ ತೊಂದರೆಯನ್ನೂ ಸಹ ಅನುಭವಿಸುತ್ತಿದ್ದೇವೆ.
-ಚನ್ನಬಸವಯ್ಯ, ಹೋಟೆಲ್ ಮಾಲೀಕ.

ಗುತ್ತಿಗೆದಾರರಿಗೆ ಹಿಡಿಶಾಪ ಹಾಕಿ ಪಯಣ
ಹುಳಿಯಾರಿಗೆ ಕೆಲಸ ನಿಮಿತ್ತ ನಿತ್ಯವೂ ಬಂದೋಗುತ್ತೇನೆ, ಈ ರಸ್ತೆಯಲ್ಲಿ ಏಳುತ್ತಿರುವ ಧೂಳು ಕುಡಿದು ಕುಡಿದು ಸಾಕಾಗಿ ಹೋಗಿದೆ, ಈ ರಸ್ತೆಯಲ್ಲಿ ಓಡಾಡುವವರೆಲ್ಲರೂ ಗುತ್ತಿಗೆದಾರರಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಸಂಚರಿಸುತ್ತಾರೆ, ಈ ರಸ್ತೆಯ ಪಕ್ಕದಲ್ಲಿ ಕಬ್ಬಿನಹಾಲು, ಕಲ್ಲಂಗಡಿ, ಜ್ಯೂಸ್ ಮಾರಿ ಬದುಕು ಕಟ್ಟಿಕೊಂಡಿದ್ದ ಅನೇಕರು ಧೂಳಿಗೆ ಹೆದರಿ ಇಲ್ಲಿಂದ ಬೇರೆಡೆ ಶಿಫ್ಟ್ ಆಗಿದ್ದಾರೆ, ಇರುವವರು ವ್ಯಾಪಾರ ಇಲ್ಲದೆ ಪರಿತಪಿಸುತ್ತಿದ್ದಾರೆ.
-ನಾಸೀರ್ ಅಹಮದ್, ಪ್ರಯಾಣಿಕ.

ಮರ, ಸೇತುವೆಯಿಂದ ಕಾಮಗಾರಿ ಕುಂಟಿತ
ಎಸ್ಎಲ್ಆರ್ ಬಂಕ್ ಬಳಿ ಸರ್ಕಲ್ ನಿರ್ಮಾಣಕ್ಕೆ ಮರ ಅಡ್ಡಿಯಾಗಿತ್ತು. ಮರ ತೆರವಿಗೆ ಅರಣ್ಯ ಇಲಾಖೆಗೆ ತಿಳಿಸಲಾಗಿತ್ತಾದರೂ ತೆರವಾಗದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇನ್ನು ಒಳಕಾಲುವೆ ಮತ್ತು ರಾಮಗೋಪಾಲ್ ಸರ್ಕಲ್ ಬಳಿ ಸೇತುವೆ ನಿರ್ಮಾಣಕ್ಕಾಗಿ ರಸ್ತೆ ಕಾಮಗಾರಿ ನಿಲ್ಲಿಸಲಾಗಿತ್ತು. ಕಾಮಗಾರಿ ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಬಹುಬೇಗ ಕಾಮಗಾರಿ ಮುಗಿಸಲು ಸೂಚಿಸಿದ್ದೇವೆ.
-ಮೃತ್ಯುಂಜಯ, ಎಇಇ, ನ್ಯಾಷನಲ್ ಹೈವೆ.

Get real time updates directly on you device, subscribe now.

Comments are closed.

error: Content is protected !!