ತುಮಕೂರು: ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ ಎಂದು ತುಮಕೂರು ಹಾಲು ಒಕ್ಕೂಟಕದ ಆಡಳಿತಾಧಿಕಾರಿ ಡಾ.ಜಿ.ಉಮೇಶ್ ಹೇಳಿದರು.
ಕಳೆದ ಜೂನ್ 28 ರಂದು ಜಿಲ್ಲೆಯಲ್ಲಿ 9,80,836 ಲೀಟರ್ ಹಾಲು ಶೇಖರಣೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ತಿಳಿಸಿದರು.
ನಗರದ ಹೊರ ವಲಯದ ಸಿದ್ದಾರ್ಥ ನಗರದಲ್ಲಿರುವ ಡಾ.ಹೆಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ನಡೆದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ 2023- 24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿ, 2023- 24ನೇ ಸಾಲಿನಲ್ಲಿ 1053.80 ಕೋಟಿ ರೂ. ಹಾಲು ಉತ್ಪಾದಕರಿಗೆ ಬಟವಾಡೆ ರೂಪದಲ್ಲಿ ಪಾವತಿಸಲಾಗಿದೆ, ಪ್ರತಿ ಕೆಜಿ ಹಾಲಿಗೆ ವಾರ್ಷಿಕ ಸರಾಸರಿ 35.20 ರಂತೆ ಹಾಲಿಗೆ ಖರೀದಿ ದರ ನೀಡಲಾಗಿದೆ ಎಂದು ಹೇಳಿದರು.
ತುಮುಲ್ ವ್ಯವಸ್ಥಾಪಕ ನಿರ್ದೇಶ ಜಿ.ಶ್ರೀನಿವಾಸನ್ ಮಾತನಾಡಿ, ಸಹಕಾರ ಸಚಿವ ಕೆ.ಎನ್.ರಾಜಣ್ಣರವರ ಕನಸಿನ ಕೂಸಾದ ರೈತರಿಗೆ ಜಿಡ್ಡಿನ ಆಧಾರದ ಮೇಲೆ ಹಣ ಕೊಡುವ ಯೋಜನೆಯನ್ನು ಸಾಕಾರಗೊಳಿಸಲು ರಾಜ್ಯದ 14 ಒಕ್ಕೂಟಗಳ ಪೈಕಿ ತುಮಕೂರು ಹಾಲು ಒಕ್ಕೂಟವು ಮುಂಚೂಣಿಯಲ್ಲಿದೆ, ತಾಂತ್ರಿಕವಾಗಿ ಒಕ್ಕೂಟವು ಸದೃಢಗೊಳ್ಳುತ್ತಿದ್ದು, ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಪರ ಉತ್ಪಾದಕರ ವಿಶ್ವಾಸ ಹೆಚ್ಚಿಸುವ ಹಾಗೂ ಪಾರದರ್ಶಕತೆಗೆ ಪೂರಕವಾಗಿರುವ ಏಕರೂಪ ತಂತ್ರಾಂಶವನ್ನು ಒಕ್ಕೂಟದ ವ್ಯಾಪ್ತಿಯ ಎಎಂಸಿಯು ಘಟಕವಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅಳವಡಿಸಿ ಸಂಘಗಳು ಕಡ್ಡಾಯವಾಗಿ ಎರಡು ಸರತಿಗಳಲ್ಲಿ ಹಾಲಿನ ಪರೀಕ್ಷೆ ಮಾಡಿ ಜಿಡ್ಡಿನಾಧಾರದ ಮೇಲೆ ದರ ನೀಡಲು ಹಾಗೂ ಹಾಲು ಉತ್ಪಾದಕರಿಗೆ ವಾಸ್ತವ ಅವಧಿಯಲ್ಲಿ ಮಾಹಿತಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಕ್ಕೂಟದ ಅಧಿಕಾರಿ, ಸಿಬ್ಬಂದಿ ಹಾಗೂ ಸದಸ್ಯರ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ತಿಮ್ಮನಾಯಕ್, ವಿದ್ಯಾನಂದ್.ಹೆಚ್.ಎಂ, ಗಿರೀಶ್, ರಾಜು, ಚಂದ್ರಶೇಖರ್, ಶ್ರೀನಿವಾಸ್ ಸೇರಿದಂತೆ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಟಗಳ ಅಧ್ಯಕ್ಷರು, ಸದಸ್ಯರು ಹಾಗೂ ಒಕ್ಕೂಟದ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.
Comments are closed.