ತುಮಕೂರು: ಸಹಕಾರ ಸಂಸ್ಥೆಗಳು ಸಮುದಾಯದ ಬೆಳವಣಿಗೆಗೆ, ಅವರ ಆರ್ಥಿಕ ಚಟುವಟಿಕೆಗೆ ನೆರವಾಗುತ್ತವೆ, ಇಂತಹ ಸಂಸ್ಥೆಗಳನ್ನು ಸಮರ್ಥವಾಗಿ ಕಟ್ಟಿ ಬೆಳೆಸಿ ಹೆಚ್ಚು ಜನರಿಗೆ ಅದರ ಪ್ರಯೋಜನವಾಗುವಂತೆ ಮಾಡಬೇಕು ಹಾಗೂ ಮುಂದಿನ ತಲೆಮಾರಿಗೆ ಸಂಸ್ಥೆಯನ್ನು ಆಸ್ತಿಯಾಗಿ ಉಳಿಸುವ ಜವಾಬ್ದಾರಿ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಇರುತ್ತದೆ ಎಂದು ಹಿರೇಮಠ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ತುಮಕೂರು ಪಟ್ಟಣ ಕ್ರೆಡಿಕ್ ಕೋ-ಆಪರೇಟೀವ್ ಸೊಸೈಟಿಯ ಸರ್ವಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಬದಲಾಗುತ್ತಿರುವ ತಂತ್ರಜ್ಞನ, ಸುಧಾರಿತ ಸೇವಾ ಕ್ರಮಗಳನ್ನು ಅಳವಡಿಸಿಕೊಂಡರೆ ಸಹಕಾರ ಸಂಸ್ಥೆಗಳು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ ಹಾಗೂ ಉತ್ತಮ ಸೇವೆಯಿಂದ ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಅವಕಾಶವಿದೆ ಎಂದು ಹೇಳಿದರು.
ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು, ಸಮುದಾಯಕ್ಕಾಗಿ ನಾವು ಮಾಡುವ ಕೆಲಸವನ್ನು ಇತರರು ಸ್ಮರಿಸುವಂತೆ ಮಾದರಿಯಾಗಿ ನಡೆದುಕೊಳ್ಳಬೇಕು, ವಿಶೇಷವಾಗಿ ಸಹಕಾರಿ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಹೆಚ್ಚು ಆದರ್ಶರಾಗಿರಬೇಕು, ಆ ಮೂಲಕ ಶಿಸ್ತಿನ ವ್ಯವಹಾರ ನಡೆಸಿ ಸಂಸ್ಥೆ ಬೆಳವಣಿಗೆಗೆ ನೆರವಾಗಬೇಕು, ಸಂಸ್ಥೆಯ ಆಡಳಿತ ಮಂಡಳಿಯವರು ಕಾಳಜಿಯಿಂದ ಶ್ರಮಿಸಿ ಸಂಸ್ಥೆ ಬೆಳೆಸುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಪಿ.ಆರ್.ದೇವರಾಜು ಮಾತನಾಡಿ, 42 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆ ಹಲವರ ಸೇವೆ ಶ್ರಮದಿಂದ ಇಂದು ದೊಡ್ಡದಾಗಿ ಬೆಳೆದಿದೆ, ಇದನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲರೂ ಸಹಕಾರ ನೀಡಬೇಕು, ಷೇರು ಬಂಡವಾಳವನ್ನು ಒಂದು ಕೋಟಿ ರೂ.ಗೆ ಹೆಚ್ಚಿಸುವುದು, 8 ಕೋಟಿ ರೂ. ವರೆಗೆ ಠೇವಣಿ ಸಂಗ್ರಹ ಮಾಡುವುದು, ನಿವ್ವಳ ಲಾಭವನ್ನು 15 ಲಕ್ಷ ರೂ.ಗೆ ಹೆಚ್ಚಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದರು.
ನಮ್ಮ ಸೊಸೈಟಿಯಿಂದ ನಿರ್ಮಿಸಿರುವ ಟಿ.ಪಿ.ಎಸ್ ಸಮುದಾಯ ಭವನ ಉದ್ಘಾಟನೆಗೊಂಡಿದ್ದು, ಸದಸ್ಯರ ಕುಟುಂಬದ ಶುಭಕಾರ್ಯಗಳಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತದೆ, ಸಂಸ್ಥೆಯಲ್ಲಿ ಹೆಚ್ಚು ಠೇವಣಿ ಹೂಡಿ ಸಾಲಗಳ ಪ್ರಯೋಜನ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು, ಸಂಘದ ಏಳಿಗೆಯೊಂದಿಗೆ ನೀವು ಬೆಳೆಯಿರಿ, ನಿಮ್ಮ ಏಳಿಗೆಯೊಂದಿಗೆ ಸಂಘವೂ ಬೆಳೆಯಲಿ ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಪಿ.ಎನ್.ದೇವರಾಜು, ನಿರ್ದೇಶಕರಾದ ಎಸ್.ಲಕ್ಷ್ಮೀನಾರಾಯಣ, ಹೆಚ್.ಬಿ.ಲಕ್ಷ್ಮೀಕಾಂತ್, ಶ್ರೀನಿವಾಸ ಪ್ರಸಾದ್, ಜಯಪ್ರಕಾಶ್, ಟಿ.ಎನ್.ರೇಣುಕುಮಾರ್, ಟಿ.ಆರ್.ಸತೀಶ್ ಕುಮಾರ್, ಮನೋಹರಗೌಡ, ಎ.ವೈ.ಹನುಮಂತರಾಯಪ್ಪ, ಜಿ.ಶಶಿಕಲಾ, ಜಿ.ನೇತ್ರಾವತಿ, ಹೆಬ್ಬೂರು ಶ್ರೀನಿವಾಸ ಮೂರ್ತಿ, ಜಿ.ವೆಂಕಟೇಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಪಿ.ಸಂದೇಶ್ ಮೊದಲಾದವರು ಭಾಗವಹಿಸಿದ್ದರು.
ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸಂಸ್ಥೆಯಿಂದ ಪುರಸ್ಕಾರ ವಿತರಿಸಲಾಯಿತು. ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
Comments are closed.