ತುಮಕೂರು ದಸರಾ ಅದ್ದೂರಿಯಾಗಿರಲಿ

ಮಿನಿ ಮೈಸೂರು ದಸರಾ ಉತ್ಸವದಂತೆ ಆಚರಿಸಿ:ಡಾ.ಪರಮೇಶ್ವರ್

2

Get real time updates directly on you device, subscribe now.


ತುಮಕೂರು: ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 11 ಮತ್ತು 12ರಂದು ಆಚರಿಸಲು ಉದ್ದೇಶಿಸಿರುವ ತುಮಕೂರು ದಸರಾ ಉತ್ಸವವನ್ನು ಮಿನಿ ಮೈಸೂರು ದಸರಾ ಉತ್ಸವವನ್ನಾಗಿ ಆಚರಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಬೇಕೆಂದು ಗೃಹ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತುಮಕೂರು ದಸರಾ ಪ್ರಧಾನ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ತುಮಕೂರು ದಸರಾ ಪ್ರಧಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಸೂರು ದಸರಾ ಮಾದರಿಯಲ್ಲಿ ತುಮಕೂರು ದಸರಾ ಉತ್ಸವವನ್ನು ಧಾರ್ಮಿಕ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲು ಈಗಾಗಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ, ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮೊದಲ ಬಾರಿಗೆ ದಸರಾ ಉತ್ಸವ ಆಯೋಜಿಸಲಾಗುತ್ತಿದ್ದು, ಉತ್ಸವವನ್ನು ವ್ಯವಸ್ಥಿತವಾಗಿ ರೂಪಿಸಲು ರಚಿಸಿರುವ ಸ್ವಾಗತ, ಆಹಾರ, ಸಾಂಸ್ಕೃತಿಕ, ಮೆರವಣಿಗೆ, ರೈತ ದಸರಾ ಮತ್ತು ವಸ್ತು ಪ್ರದರ್ಶನ, ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾ, ದೀಪಾಲಂಕಾರ, ಕ್ರೀಡೆ, ವೇದಿಕೆ ನಿರ್ಮಾಣ ಸಮಿತಿ ಸೇರಿದಂತೆ ಎಲ್ಲಾ ಸಮಿತಿಗಳಿಗೂ ಸ್ಥಳೀಯ ಜನಪ್ರತಿನಿಧಿ, ದೇವಸ್ಥಾನದ ಅರ್ಚಕರು, ನಾಗರಿಕರು, ಪತ್ರಕರ್ತರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮಗಳ ರೂಪು- ರೇಷೆ ತಯಾರಿಸಬೇಕೆಂದು ನಿರ್ದೇಶಿಸಿದರಲ್ಲದೆ, ಯಾವುದೇ ಜಾತಿ, ಮತ, ಧರ್ಮ, ವೈಯಕ್ತಿಕ ಪ್ರತಿಷ್ಠಗಳಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಉತ್ಸವದಲ್ಲಿ ಪಾಲ್ಗೊಂಡು ಜಿಲ್ಲೆಯ ಖ್ಯಾತಿ ಹೆಚ್ಚಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗಾಗಿ ರೂಪಿಸಿರುವ ಸಿದ್ಧತೆಗಳನ್ನು ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ಸಭೆಗೆ ಮಾಹಿತಿ ನೀಡುತ್ತಾ 2 ದಿನಗಳ ಕಾಲ ನಡೆಯುವ ದಸರಾ ಉತ್ಸವದಲ್ಲಿ ರಾಜ್ಯದ ಪ್ರಸಿದ್ಧ ಗಾಯಕರಿಂದ ಗೀತಗಾಯನ, ಮಕ್ಕಳಿಂದ ಶಾಸ್ತ್ರೀಯ ಸಂಗೀತ ಕಚೇರಿ, ಸ್ಥಳೀಯ ಕಲೆಗಳ ಪ್ರದರ್ಶನ, ಮ್ಯಾರಥಾನ್ ಸ್ಪರ್ಧೆ, ಕ್ರೀಡಾ ಸ್ಪರ್ಧೆ ಆಯೋಜಿಸಲು ಅಧಿಕಾರಿಗಳ ತಂಡ ಅಣಿಯಾಗಿದೆ. ಉತ್ಸವದ 2ನೇ ದಿನ ಅಂತಿಮವಾಗಿ ಜನಾಕರ್ಷಕ ದ್ರೋಣ್ ಪ್ರದರ್ಶನ ಹಾಗೂ ಬಾಣ- ಬಿರುಸುಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಮಾತನಾಡಿ, ಮೆರವಣಿಗೆಯಲ್ಲಿ 3 ಆನೆಗಳು, ಹಳ್ಳಿಕಾರ್ ಎತ್ತು, ಕುದುರೆ, ವಿಂಟೇಜ್ ಕಾರು, ಜಿಲ್ಲೆಯ 70ಕ್ಕೂ ಹೆಚ್ಚು ದೇವರ ಉತ್ಸವ ಮೂರ್ತಿಗಳು ಸೇರಿದಂತೆ 15 ಕಲಾ ತಂಡ ಭಾಗವಹಿಸಲಿವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ತುಮಕೂರು ದಸರಾ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಿದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ತುಮಕೂರು ದಸರಾ ಪ್ರಧಾನ ಸಮಿತಿ ಸಹ ಅಧ್ಯಕ್ಷ ವಿ.ಸೋಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಯೋಜಿಸುತ್ತಿರುವ ತುಮಕೂರು ದಸರಾ ಕಾರ್ಯಕ್ರಮ ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವಂತಾಗಬೇಕು, ನಮ್ಮ ಪರಂಪರೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಇಂತಹ ಹಬ್ಬಗಳ ಸಾಮೂಹಿಕ ಆಚರಣೆ ಅಗತ್ಯವಿದೆ ಎಂದರು.

ಸಭೆಯಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ .ಎನ್.ತಿಪ್ಪೇಸ್ವಾಮಿ, ಮುಜರಾಯಿ ಇಲಾಖೆ ತಹಶೀಲ್ದಾರ್ ಸವಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!