ತುಮಕೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣವಾಗಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಎಡವಿದ್ದು ಎಲ್ಲಿ? ಎಂಬ ಸೋಲಿನ ಪರಾಮರ್ಶೆ ಮಾಡಿಕೊಂಡು ಮುಂದೆ ಆ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಘೋರ್ಪಡೆ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 2024ರ ಲೋಕಸಭಾ ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಲು ಆಗಮಿಸಿದ್ದ ವಿನಯಸೊರಕೆ ನೇತೃತ್ವದ ಸತ್ಯಶೋಧನಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ನಾವು ಈ ಹಿಂದೆ 2019 ರಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವು, ಆದರೆ ಹುಟ್ಟಿನಿಂದಲೂ ಸಾಂಪ್ರದಾಯಕ ಎದುರಾಳಿಗಳಾಗಿರುವ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು ಒಂದಾಗುವುದು ಕಷ್ಟವಾದ ಕಾರಣ ಒಳ್ಳೆಯ ಫಲಿತಾಂಶ ಪಡೆಯಲಾಗಲಿಲ್ಲ, ಆದರೆ ಜೆಡಿಎಸ್- ಬಿಜೆಪಿ ಮೈತ್ರಿಯಲ್ಲಿ ಬಿಜೆಪಿಗಿಂತಲೂ ಜೆಡಿಎಸ್ ಹೆಚ್ಚು ಕೆಲಸ ಮಾಡಿದ್ದರ ಪರಿಣಾಮ ಬಿಜೆಪಿಗೆ ಲಾಭವಾಗಿದೆ, ಆದರೆ ಇದನ್ನು ಮರೆತು ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಕ್ಷದ ಚುನಾವಣೆಗಳಲ್ಲಿ ಪಾಲ್ಗೊಳ್ಳಬೇಕಿದೆ, ಆಗ ಮಾತ್ರ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದರು.
ಮಾಜಿ ಸಂಸದ ಹಾಗೂ 2024ನೇ ಸಾಲಿನ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದ ಹನುಮೇಗೌಡ ಮಾತನಾಡಿ, ಜಿಲ್ಲೆಯ ಮಟ್ಟಿಗೆ ಜೆಡಿಎಸ್-ಕಾಂಗ್ರೆಸ್ ಪ್ರಬಲ ಎದುರಾಳಿಗಳು, ಮುಖಂಡರು, ಕಾರ್ಯಕರ್ತರು ಒಗ್ಗೂಡದ ಕಾರಣ 2019ರಲ್ಲಿ ದೇವೇಗೌಡರಿಗೆ ಸೋಲಾಯಿತು, ಆದರೆ 2024 ರಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಯಲ್ಲಿ ಜೆಡಿಎಸ್ ಹೆಚ್ಚು ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಕೊಂಡ ಪರಿಣಾಮ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಿದೆ, ಆಗಿರುವುದನೆಲ್ಲಾ ಮರೆತು ಮುಂದಿನ ಚುನಾವಣೆ ಎದುರಿಸಬೇಕಾಗಿದೆ, ಲೋಕಸಭಾ ಚುನಾವಣೆಯ ಸೋಲಿನ ಆತ್ಮವಿಮರ್ಶೆಯ ಜೊತೆ ಜೊತೆಗೆ, ಜಿಪಂ, ತಾಪಂ ಚುನಾವಣೆಗಳಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಬೇಕಾಗಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗುವಂತೆ ಸಲಹೆ ನೀಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಒಂದು ಪಕ್ಷದ ಅಭ್ಯರ್ಥಿ ಸೋತಾಗ ಸೋಲಿನ ಕಾರಣ ಏನು ಎಂದು ತಿಳಿದುಕೊಳ್ಳುವುದು ಮುಖ್ಯ, ಈ ನಿಟ್ಟಿನಲ್ಲಿ ವಿನಯಕುಮಾರ್ ಸೊರಕೆ ಮತ್ತು ಘೋರ್ಪಡೆ ಅವರು ತುಮಕೂರು ಜಿಲ್ಲೆಗೆ ಆಗಮಿಸಿದ್ದಾರೆ, ಅವರ ಮುಂದೆ ಕಾರ್ಯಕರ್ತರು ತಮ್ಮ ಅಭಿಪ್ರಾಯ ತಿಳಿಸಬೇಕು, ಕಾಂಗ್ರೆಸ್ ನ್ನು ಲೀಡರ್ ಬೇಸ್ ನಿಂದ ಕೇಡರ್ ಬೆಸ್ಗೆ ಬದಲಾಯಿಸಬೇಕಾಗಿದೆ ಎಂದರು.
ಮಾಜಿ ಸಚಿವ, ಬೆಂಗಳೂರು ವಿಭಾಗ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಶಾಸಕ ಗಂಗಹನುಮಯ್ಯ, ರಾಮಕೃಷ್ಣ, ಮುರುಳೀಧರ ಹಾಲಪ್ಪ, ಮಾಜಿ ಶಾಸಕ ಡಾ.ರಫಿಕ್ ಅಹಮದ್, ಇಕ್ಬಾಲ್ ಅಹಮದ್, ಷಣ್ಮುಖಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್ ಇತರರು ಇದ್ದರು.
Comments are closed.