ಕೋವಿಡ್ ಲಸಿಕೆ, ಹಾಸಿಗೆಗಳ ಕೊರತೆಯಿಲ್ಲ: ಸಚಿವ ಮಾಧುಸ್ವಾಮಿ

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಕಲ ಸಿದ್ಧತೆ

95

Get real time updates directly on you device, subscribe now.

ತುಮಕೂರು: ಕೋವಿಡ್- 19 ಎರಡನೇ ಅಲೆ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿನ್ವಯ ಕ್ರಮ ಕೈಗೊಂಡಿದ್ದು, ಸಮರ್ಪಕ ಹಾಸಿಗೆ, ಐಸಿಯು ವ್ಯವಸ್ಥೆ ಮತ್ತು ಲಸಿಕಾ ವಿತರಣೆ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2020- 21ನೇ ಸಾಲಿನ 4ನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪೂರೈಕೆ ಸಮರ್ಪಕವಾಗಿದೆ, ಪ್ರಸ್ತುತ ಲಸಿಕೆ, ಹಾಸಿಗೆಗಳ ಕೊರತೆಯಿಲ್ಲ, ಕೋವಿಡ್ ತಡೆಗೆ ಮನೆಮನೆ ಸರ್ವೆ ಕಾರ್ಯವನ್ನೂ ಮಾಡಲಾಗುತ್ತಿದ್ದು, ಲಕ್ಷಣ ಕಂಡು ಬಂದಲ್ಲಿ ಅಂತಹವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ಕೋವಿಡ್ ಪಾಸಿಟಿವ್ ಬಂದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಬೇಕು, ವೈದ್ಯರ ಸಲಹಾ ಚೀಟಿಯಿಲ್ಲದೆ ಮೆಡಿಕಲ್ಗಳಲ್ಲಿ ಔಷಧಿಗಳನ್ನು ನೀಡಬಾರದು, ವಯಸ್ಸಾದವರನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಬೇಕು, ವಿವಿಧ ರೋಗಗಳಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಿ ಬಳಿಕ ದಾಖಲು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನೇ ಪಾಲಿಸಬೇಕಾಗಿದೆ, ಹಾಗಾಗಿ ಬೆಂಗಳೂರಿಗೆ ಸಮೀಪವಿರುವ, ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ, ಆಂಧ್ರಪ್ರದೇಶ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ತುಮಕೂರು ಜಿಲ್ಲೆಗೆ ಸೋಂಕು ಹೇಗೆ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಲು ಕಷ್ಟವಾಗುತ್ತಿದೆ, ಈ ಬಗ್ಗೆ ಸ್ವಯಃ ನಿರ್ಧಾರ ಕೈಗೊಳ್ಳಲು ಜಿಲ್ಲೆಗೆ ಅನುಮತಿ ಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ 200 ಹಾಸಿಗೆ, 21 ಐಸಿಯು ಹಾಗೂ ಎಲ್ಲಾ ತಾಲೂಕುಗಳಲ್ಲಿಯೂ ಆಮ್ಲಜನಕ ಸಹಿತ 50 ಹಾಸಿಗೆ ವ್ಯವಸ್ಥೆಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತುಮಕೂರಿನ ಎರಡು ಮೆಡಿಕಲ್ ಕಾಲೇಜುಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕೋವಿಡ್ಗಾಗಿ ಶೇ.50 ರಷ್ಟು ಹಾಸಿಗೆ ಮೀಸಲಿರಿಸಲು ಒಪ್ಪಿಗೆ ನೀಡಿದ್ದು, ಅದರಂತೆ ಕೋವಿಡ್ ಸೋಂಕಿತರು ಅಲ್ಲಿಯೂ ದಾಖಲು ಆಗಬಹುದು, ಉಳಿದಂತೆ ಭಾರತೀಯ ವೈದ್ಯಕೀಯ ಸಂಘದಡಿಯ ಖಾಸಗಿ ಆಸ್ಪತ್ರೆಗಳಲ್ಲಿಯೂ ಶೇ.50 ರಷ್ಟು ಹಾಸಿಗೆ ಮೀಸಲಿಡಲು ಒಪ್ಪಿಗೆ ನೀಡಿದ್ದಾರೆ, ಜಿಲ್ಲೆಯಲ್ಲಿ ಸದ್ಯಕ್ಕೆ ಆಮ್ಲಜನಕದ ಸಮಸ್ಯೆಯಿಲ್ಲ, ಮೊದಲು ಸರ್ಕಾರಿ ಲ್ಯಾಬ್ಗಳಲ್ಲಿ ಮಾತ್ರ ಕೋವಿಡ್ ಪರೀಕ್ಷೆ ಮಾಡಲು ಅವಕಾಶವಿತ್ತು, ಆದರೆ ಈಗ ಖಾಸಗಿ ಆಸ್ಪತ್ರೆಗಳ ಲ್ಯಾಬ್ನಲ್ಲಿಯೂ ಪರೀಕ್ಷೆ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಹೆಚ್ಚು ಪರೀಕ್ಷೆ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ, ತುಮಕೂರು ನಗರ, ಗ್ರಾಮಾಂತರ ಹಾಗೂ ಶಿರಾದಲ್ಲಿ ಹೆಚ್ಚು ಪ್ರಕರಣ ಕಂಡುಬರುತ್ತಿವೆ, ಜಿಲ್ಲಾಸ್ಪತ್ರೆಯಲ್ಲಿ 151 ಸೋಂಕಿತರು ಉಳಿದಂತೆ ಜಿಲ್ಲೆಯ ತಾಲ್ಲೂಕುಗಳಲ್ಲಿ 95 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 239 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 2241 ಸೋಂಕಿತರು ಹೋಂ ಐಸೋಲೇಷನ್ನಲ್ಲಿದ್ದಾರೆ, ಜಿಲ್ಲೆಯಲ್ಲಿ ರೆಮ್ಡಿಸಿಯರ್ ಕೊರತೆಯಿಲ್ಲ, ಲಸಿಕೆ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲವೂ ಸಮರ್ಪಕವಾಗಿವೆ ಎಂದು ಸಭೆಗೆ ತಿಳಿಸಿದರು.
ಶಾಸಕರಾದ ಬಿ.ಸಿ.ನಾಗೇಶ್, ಡಾ.ಎಂ.ರಾಜೇಶ್ಗೌಡ, ರಂಗನಾಥ್, ಡಿ.ಸಿ.ಗೌರಿಶಂಕರ್, ತಿಪ್ಪೇಸ್ವಾಮಿ ಅವರು ಕೋವಿಡ್ ನಿಯಂತ್ರಣ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲೆಯಾದ್ಯಂತ 2016- 17ನೇ ಸಾಲಿನಿಂದಲೂ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯ ಭವನಗಳ ನಿರ್ಮಾಣವನ್ನು ತ್ವರಿತಗೊಳಿಸಬೇಕು, ಭವನ ನಿರ್ಮಾಣ ಸಂಬಂಧ ಸಮಸ್ಯೆಗಳಿದ್ದರೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡು ಭವನಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಉಳಿದಂತೆ ಹಾಸ್ಟೆಲ್ಗಳ ಕಟ್ಟಡಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೊರೊನಾ ನೆಪದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗದಂತೆ ಶಿಕ್ಷಣಕ್ಕೆ ಒತ್ತು ನೀಡಬೇಕು, ಶಾಲೆಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೂ ವಿವಿಧ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಕೊಟ್ಟು 10ನೇ ತರಗತಿ ಉತ್ತಮ ಫಲಿತಾಂಶಕ್ಕೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಅಧಿಕಾರಿಗಳು ಕೆಲಸ ಮಾಡುವಲ್ಲಿ ವಿಳಂಬ ಧೋರಣೆ ಮಾಡುತ್ತಿದ್ದಾರೆ ಎಂದಾಗ, ಇದಕ್ಕೆ ಪ್ರತಿಕ್ರಿಯಿಸಿ ಸಚಿವರು, ಶಾಸಕರ ಅನುದಾನ ಕನ್ವರ್ಜೆನ್ಸ್ಗೆ ಕೊಟ್ಟಿದ್ದಂತಹ ಕಾಮಗಾರಿ ಯಾವ ಹಂತದಲ್ಲಿವೆ ಎಂಬುದರ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಎಂಎಲ್ಸಿ ತಿಪ್ಪೇಸ್ವಾಮಿ ಮಾತನಾಡಿ, ಫಸಲ್ ಭೀಮಾ ಯೋಜನೆಯಡಿ ಸಿಗುವ ಸೌಲಭ್ಯಕ್ಕೆ ರೈತರ ನೋಂದಣಿ ಕಡಿಮೆಯಾಗುತ್ತಿದೆ. ರೈತರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಫಸಲ್ ಭೀಮಾ ಯೋಜನೆ ಬಗ್ಗೆ ರೈತರಿಗೆ ಹೆಚ್ಚು ಮಾಹಿತಿ ನೀಡುವಂತೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ನಿರ್ದೇಶಿಸಿದರು.
ಜಾನುವಾರುಗಳಿಗೆ ವಿವಿಧ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಹಾಕುವ ಗುರಿ ನೂರರಷ್ಟು ಸಾಧನೆಯಾಗಿಲ್ಲ, ಕುರಿಗಳನ್ನು ಒಳಪಡಿಸಿಕೊಂಡು ಲಸಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಿ ಲಸಿಕೆ ಹಾಕಿಸುವ ಬಗ್ಗೆ ಹೆಚ್ಚು ಅರಿವು ಮೂಡಿಸಿ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗೆ ಸಚಿವರು ಸೂಚಿಸಿದರು.
ಕೋವಿಡ್ ಅಲೆ ಮುಗಿಯುವವರೆಗೂ ವಯಸ್ಕರ ಶಿಕ್ಷಣ ತರಗತಿಗಳನ್ನು ನಿಲ್ಲಿಸುವಂತೆ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಬಡ ರೈತರಿಗೆ ಸೌಲಭ್ಯ ಕಲ್ಪಿಸುತ್ತಿರುವ ವಿವಿಧ ಇಲಾಖೆಗಳ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ, ಆದರೆ ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಹಾಗೂ ಕೊಳವೆ ಬಾವಿ ಕೊರೆಯುವ ಕಾರ್ಯ ವಿಳಂಬವಾಗುತ್ತಿದೆ, ಅಧಿಕಾರಿಗಳು, ಇಲಾಖೆಗಳ ಸಮನ್ವಯದೊಂದಿಗೆ ಕೊಳವೆ ಬಾವಿ ಕೊರೆದ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿಕೊಡುತ್ತೇವೆಂದು 80 ರಿಂದ 1ಲಕ್ಷದ ವರೆಗೂ ಹಣ ಪಡೆಯುವವರ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ, ಈಗಾಗಲೇ ಮಾಯಸಂದ್ರದಲ್ಲಿ ಒಬ್ಬರನ್ನು ಬಂಧಿಸಲಾಗಿದೆ, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚಿಸಿದರು.
ತಿಪಟೂರಿನಲ್ಲಿ ತೆಂಗು ಉತ್ಪನ್ನ ಕಾರ್ಯಕ್ರಮ ಮತ್ತು ತುಮಕೂರಿನಲ್ಲಿ ತೆಂಗು ಉತ್ಪನ್ನ ಕಾರ್ಖಾನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಸಭೆಗೂ ಮುನ್ನ ದೇವರ ದಾಸಿಮಯ್ಯ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪುಷ್ಟಾರ್ಚನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಚಿವರು, ದೇವರ ದಾಸಿಮಯ್ಯನವರ ವಚನಗಳು ಸಮಾಜಕ್ಕೆ ಪ್ರಸ್ತುತವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.
ಬಳಿಕ ವಿಶ್ವ ಪಾರಂಪರಿಕ ದಿನದ ಅಂಗವಾಗಿ ಜಿಲ್ಲೆಯ ಪ್ರಮುಖ 12 ಪ್ರವಾಸಿತಾಣಗಳ ತಲಾ ಒಂದು ನಿಮಿಷದ ದೃಶ್ಯ ತುಣುಕನ್ನು ಪ್ರದರ್ಶಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚೌಡಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ ಕೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!