ಹುಳಿಯಾರು: ಆಗಸ್ಟ್ ಮಾಹೆಯಲ್ಲಿ ಅಬ್ಬರಿಸಿ ರೈತನ ಸಂಭ್ರಮಕ್ಕೆ ಕಾರಣನಾಗಿದ್ದ ಮಳೆರಾಯ ಸೆಪ್ಟೆಂಬರ್ ಮಾಹೆಯಲ್ಲಿ ಕಾಣದಂತೆ ಮಾಯವಾಗಿ ರೈತನ ಕಣ್ಣೀರಿಗೆ ಕಾರಣನಾಗಿದ್ದಾನೆ, ಅತೀ ಉತ್ಸಾಹದಿಂದ ಬಿತ್ತಿದ್ದ ರಾಗಿ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾನೆ, ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನದಾತ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ, ಆಕಾಶ ನೋಡಿ ಕೈ ಮುಗಿದು ಕೃಪೆ ತೋರು ಎಂದು ಬೇಡಿಕೊಳ್ಳುತ್ತಿದ್ದಾನೆ.
ಕಳೆದ ವರ್ಷ ಇಡೀ ತಾಲೂಕಿನಲ್ಲಿ ಮಳೆಯ ಕೊರತೆಯಾಗಿ ಬರಗಾಲ ಆವರಿಸಿತ್ತು, ಆದರೆ ಈ ವರ್ಷ ಫೆಬ್ರವರಿ ಮಾಹೆಯಲ್ಲೇ ವಾಡಿಕೆಗಿಂತ 3.3 ಮಿ.ಮೀ ಹೆಚ್ಚು ಮಳೆ ಬಿದ್ದು ರೈತರಲ್ಲಿ ಭರವಸೆ ಮೂಡಿಸಿತ್ತು, ಮೇ ತಿಂಗಳಿಂದಲೂ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಆಗಸ್ಟ್ ಮಾಹೆಯಲ್ಲಂತೂ ದಾಖಲೆಯ 307.2 ಮಿಮೀ ಹೆಚ್ಚು ಮಳೆಯಾಗಿತ್ತು, ಪರಿಣಾಮ ಬರೋಬ್ಬರಿ ದಾಖಲೆಯ 31,500 ಹೆಕ್ಟರ್ ರಾಗಿ ಬಿತ್ತನೆ ಮಾಡಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ.
ಆದರೆ ತಿಂಗಳಿಂದ ಒಂದೇ ಒಂದು ಹನಿ ಮಳೆ ನೀರು ಭೂ ರಮೆಯ ತಣಿಸದೆ ರೈತನಿಗೆ ಆಘಾತ ನೀಡಿದೆ, ಬಾಣಲಿಯಿಂದ ಬೆಂಕಿಗೆ ಬಿದ್ದಂಗೆ ಎನ್ನುವಂತೆ ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಉಷ್ಣಾಂಶ ಸಹ ಏರಿದೆ, ಬಿಸಿಲಿನ ತಾಪಕ್ಕೆ ರಾಗಿ ಪೈರು ಒಣಗಲಾರಂಭಿಸಿದ್ದು ತೇವಾಂಶದ ಕೊರತೆಯುಂಟಾಗಿ ಬೆಳೆ ಹಾನಿಯ ಭೀತಿ ಎದುರಾಗಿದೆ, ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಸಾಲಸೋಲ ಮಾಡಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದರು, ಆಗ ಸ್ವಲ್ಪ ಮಳೆಯಾಗಿದ್ದರಿಂದಾಗಿ ಉತ್ತಮ ಫಸಲು ಬರಲಿ ಎಂಬ ಕಾರಣಕ್ಕಾಗಿ ಕಳೆ ಕಿತ್ತು ಗೊಬ್ಬರ ಹಾಕಿದ್ದರು, ಆ ಬಳಿಕ ಮಳೆಯೇ ಬಾರದ ಕಾರಣ ರೈತರು ಚಿಂತಾಕ್ರಾಂತರಾಗಿದ್ದಾರೆ.
ತೇವಾಂಶ ಕೊರತೆಯ ಕಾರಣದಿಂದಾಗಿ ಈ ಎಲ್ಲಾ ಬೆಳೆಗಳು ಒಣಗುತ್ತಿವೆ, ಅಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಬಾಡುವಂತೆ ಗೋಚರಿಸುತ್ತಿವೆ, ವಾರದಲ್ಲಿ ಮಳೆ ಬಾರದೆ ಇದ್ದರೆ ಸಂಪೂರ್ಣ ಬೆಳೆ ನೆಲಕಚ್ಚಲಿದೆ, ಹಾಗಾಗಿ ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ, ಕೊಳವೆಬಾವಿಯಲ್ಲಿ ಹೆಚ್ಚು ನೀರು ಇರುವ ಕೆಲವು ರೈತರು, ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಿ, ರಾಗಿ ಪೈರು ರಕ್ಷಣೆಯಲ್ಲಿ ನಿರತರಾಗಿದ್ದಾರೆ, ಇನ್ನೂ ಕೆಲವರು ಅಕ್ಕಪಕ್ಕದ ತೋಟದವರಿಂದ ಇಂತಿಷ್ಟು ರಾಗಿ ಕೊಡುವ ಒಪ್ಪಂದ ಮಾಡಿಕೊಂಡು ನೀರು ಪಡೆದು ರಾಗಿ ಉಳಿಸಿಕೊಳ್ಳುತ್ತಿದ್ದಾರೆ, ಯಾವುದೇ ನೀರಿನ ವ್ಯವಸ್ಥೆ ಇಲ್ಲದ ರೈತರು ದೇವರ ಮೇಲೆ ಭಾರ ಹಾಕಿ ಕೃಪೆ ತೋರು ವರುಣ ಎಂದು ಕೈ ಮುಗಿದು ಪ್ರಾರ್ಥಿಸುತ್ತಿದ್ದಾನೆ.
Comments are closed.