ಜೀತ ಪದ್ಧತಿಯಿಂದ ವೃದ್ಧ ದಂಪತಿ ಮುಕ್ತ

ತೋಟದಲ್ಲಿ ಕೂಡಿ ಹಾಕಿ ಹಿರಿಯ ಜೀವಗಳಿಗೆ ಹಿಂಸೆ

3

Get real time updates directly on you device, subscribe now.


ಮಧುಗಿರಿ: ಕೃಷಿ ಕೂಲಿ ಕಾರ್ಮಿಕ ವೃದ್ಧ ದಂಪತಿಯನ್ನ ಜೀತಕ್ಕಿಟ್ಟುಕೊಂಡು ಕಾಡು ಪ್ರಾಣಿಗಳಂತೆ ತೋಟದಲ್ಲಿ ಕೂಡಿ ಹಾಕಿ ದೌರ್ಜನ್ಯ ಮೆರೆದಿರುವ ಘಟನೆ ನಡೆದಿದ್ದು, ಸ್ಥಳಕ್ಕೆ ತಾಲೂಕಿನ ಅಧಿಕಾರಿಗಳು ಭೇಟಿ ನೀಡಿ ಅವರನ್ನು ಬಿಡುಗಡೆಗೊಳಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಮಧುಗಿರಿ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬೆಲ್ಲದಮಡಗು ಗ್ರಾಮದ ತೋಟದಲ್ಲಿ ವೃದ್ಧ ದಂಪತಿಯನ್ನು ತೋಟದ ಬೆಂಗಳೂರು ಮೂಲದ ಮಾಲೀಕ ಲಕ್ಷ್ಮೀನಾರಾಯಣ ಎಂಬಾತ ತೋಟದಲ್ಲಿ ಜೀತಕ್ಕಿಟ್ಟುಕೊಂಡು ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹನುಮಂತರಾಯಪ್ಪ, ರಾಮಕ್ಕ ಎಂಬ ವೃದ್ಧ ದಂಪತಿಯನ್ನು ಕೆಲಸಕ್ಕೆಂದು ಕರೆತಂದು ತೋಟದಲ್ಲಿ ಕೂಡಿ ಹಾಕಿಲಾಗಿದ್ದು, ಕುಡಿಯುವ ನೀರಿಗೂ ನಿರ್ಬಂಧ ಹೇರಿದ್ದು ಜಮೀನಿನ ಮುಖ್ಯ ದ್ವಾರಕ್ಕೂ ಜಮೀನಿನ ಮಾಲೀಕ ಬೀಗ ಜಡಿದು ಹೋಗಿದ್ದು ವೃದ್ಧ ದಂಪತಿ ಪರಿದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಿಂಗಳಿಗೆ ತಲಾ 14 ಸಾವಿರ ಸಂಬಳ, ವಸತಿ ನೀಡುವುದಾಗಿ ಹೇಳಿದ್ದ ಜಮೀನು ಮಾಲೀಕ ನುಡಿದಂತೆ ನಡೆಯದೆ ಎರಡು ತಿಂಗಳಿಂದ ಸಂಬಳ ನೀಡದೆ ವಂಚಿಸಿದ್ದಾನೆಂಬ ಆರೋಪ ಮಾಲೀಕನ ವಿರುದ್ಧ ಕೇಳಿ ಬಂದಿದೆ, ದಂಪತಿ ವಾಸವಿದ್ದ ಶೆಡ್ಗೂ ಕೂಡ ಬೀಗ ಹಾಕಲಾಗಿದ್ದು ವೃದ್ಧ ದಂಪತಿ ಊಟ, ಕುಡಿಯಲು ನೀರು ಇಲ್ಲದೆ ತೋಟದಲ್ಲಿ ನರಳುತ್ತಿದ್ದರೆಂದು ತಿಳಿದ ಸಾರ್ವಜನಿಕರು ದಂಪತಿಗೆ ಸ್ಥಳೀಯರಿಂದ ನೆರವು ನೀಡಿ ವೃದ್ಧ ದಂಪತಿ ರಕ್ಷಣೆ ಮಾಡುವಂತೆ ಹಾಗೂ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳಿಂದ ಒತ್ತಾಯಿಸಲಾಗಿತ್ತುಯ, ಮಾಹಿತಿ ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಶರೀನ್ ತಾಜ್ ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ವೃದ್ಧ ದಂಪತಿಗೆ ನೆರವಾಗಿದ್ದಾರೆ.

ಅವರನ್ನು ಬುಧವಾರ ರಾತ್ರಿ ನಿರಾಶ್ರಿತರ ಕೇಂದ್ರದಲ್ಲಿ ಬಿಟ್ಟಿದ್ದು, ಗುರುವಾರ ಜೀತ ವಿಮುಕ್ತ ಪ್ರಮಾಣ ಪತ್ರ ನೀಡಿ ಮನೆಗೆ ಕಳುಹಿಸಿ ಕೊಡಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ , ಬೆಲ್ಲದಮಡುಗು ಗ್ರಾಮದಲ್ಲಿ ವೃದ್ಧ ದಂಪತಿಯನ್ನು ತೋಟದಲ್ಲಿ ಅನ್ನ- ನೀರು ನೀಡದೆ ಮತ್ತು ಮೂಲಭೂತ ಸೌಲಭ್ಯ ಒದಗಿಸಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ನೇತೃತ್ವದ ತಂಡ ತೆರಳಿ ವೃದ್ಧ ದಂಪತಿ ಬಿಡುಗಡೆಗೊಳಿಸಿ ಕರೆತಂದಿದ್ದು, ಅವರಿಗೆ ಜೀತ ವಿಮುಕ್ತಿ ಪ್ರಮಾಣ ಪತ್ರ ನೀಡಲಾಗಿದೆ, ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದ್ದು, ಖುದ್ದು ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!