ಗಾಂಧೀಜಿ ಪಡೆದ ನಾವೇ ಅದೃಷ್ಟವಂತರು

ಗ್ಯಾರಮೂರ್ತಿ ಕಲಾಕೃತಿ ಉದ್ಘಾಟಿಸಿದ ಸಚಿವ ಡಾ.ಪರಮೇಶ್ವರ್

4

Get real time updates directly on you device, subscribe now.


ತುಮಕೂರು: ಅಹಿಂಸೆ, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಗಳಿಸಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಮಹಾ ನಗರ ಪಾಲಿಕೆ ವತಿಯಿಂದ ನಗರದ ಅಮಾನಿಕೆರೆ ಉದ್ಯಾನವನದಲ್ಲಿ ನಿರ್ಮಿಸಿರುವ ಗ್ಯಾರಮೂರ್ತಿ ಕಲಾಕೃತಿ ಉದ್ಘಾಟಿಸಿ ಮಾತನಾಡಿ, ಜಗತ್ತಿನ ಹಲವಾರು ದೇಶಗಳು ಗಾಂಧೀಜಿಯವರ ಆದರ್ಶ ಒಪ್ಪಿ, ಅಳವಡಿಸಿಕೊಂಡಿವೆ, ಇದಕ್ಕೆ ಸಾಕ್ಷಿಯಾಗಿ ಬಹುತೇಕ ಪ್ರಪಂಚದ ಎಲ್ಲಾ ದೇಶಗಳಲ್ಲಿ ಗಾಂಧೀಜಿ ಅವರ ಪ್ರತಿಮೆ ಕಾಣಬಹುದಾಗಿದೆ, ಆಫ್ರಿಕಾ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ನೆಲ್ಸನ್ ಮಂಡೇಲಾ ಅವರಿಗೆ ಗಾಂಧೀಜಿಯವರ ಆದರ್ಶಗಳೇ ಪ್ರೇರಣೆಯಾಗಿದ್ದವು, ಗಾಂಧಿ ಭಾರತದ ಶಕ್ತಿಯಾಗಿದ್ದರು, ಗಾಂಧೀಜಿಯವರನ್ನು ಪಡೆದ ನಾವೆಲ್ಲ ಅದೃಷ್ಟವಂತರು ಎಂದು ಅವರು ಎಂದು ಹೇಳಿದರು.

ಸಂಸದ ವಿ.ಸೋಮಣ್ಣ ಹಾಗೂ ನಾನು ಇಬ್ಬರೂ ಸೇರಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಭೇದವಿಲ್ಲದೆ ಒಟ್ಟಾಗಿ ಶ್ರಮಿಸುತ್ತೇವೆ, ನಗರದ 2 ಕಡೆ ಬೃಹತ್ ಸ್ವಾಗತ ಕಮಾನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ನಗರದ ಅಮಾನಿ ಕೆರೆ ಗ್ಯಾರಮೂರ್ತಿ ಕಲಾಕೃತಿ ನಿರ್ಮಾಣವು ತುಮಕೂರು ಬದಲಾಗುತ್ತಿರುವುದರ ಸಂಕೇತವಾಗಿದೆ, ತುಮಕೂರು ಜಿಲ್ಲೆ ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿದೆ, ಜಿಲ್ಲೆಗೆ ಸಬ್ ಅರ್ಬನ್ ರೈಲು, ಮೆಟ್ರೋ ರೈಲು ಬರಲಿದೆ, ವಸಂತ ನರಸಾಪುರದಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿರುವುದರಿಂದ ಮೆಟ್ರೋ ರೈಲನ್ನು ವಸಂತ ನರಸಾಪುರದ ವರೆಗೂ ಕೊಂಡೊಯ್ಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರಲ್ಲದೆ ಅಮಾನಿಕೆರೆಗೆ ಕಲುಷಿತ ನೀರು ಸೇರಿ ಕೆಟ್ಟ ವಾಸನೆ ಬರುತ್ತಿದ್ದು, ಕಲುಷಿತ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲು ಈಗಾಗಲೇ ನೀಲಿನಕ್ಷೆ ತಯಾರಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ.ಸೋಮಣ್ಣ ಮಾತನಾಡಿ ಸ್ವಚ್ಛ ಭಾರತ ಗಾಂದೀಜಿಯವರ ಕನಸಾಗಿತ್ತು, ಗಾಂಧಿ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮ ಯಶಸ್ವಿ ಕಂಡಿದೆ, ವಿಶ್ವದ ಭೂಪಟದಲ್ಲಿ ದೇಶದ ಹೆಸರನ್ನು ಗುರುತಿಸುವಂತೆ ಮಾಡಿರುವ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿಯರಂತಹ ಸಾಧಕರ ಮಾರ್ಗದಲ್ಲಿ ನಮ್ಮ ಮಕ್ಕಳು ನಡೆಯುವಂತಾಗಬೇಕು ಎಂದು ಕರೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಗ್ಯಾರಾ ಮೂರ್ತಿಗಳ ಬಗ್ಗೆ ಮಾಹಿತಿ ನೀಡುತ್ತಾ ಅಮಾನಿಕೆರೆಯ ಗ್ಯಾರಾ ಮೂರ್ತಿ(ಹನ್ನೊಂದು ಮೂರ್ತಿ) ಎಂಬುದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಚಳವಳಿಯಾದ ದಂಡಿಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ಬಿಂಬಿಸುವ ಕಲಾಕೃತಿಯಾಗಿದೆ, ಮಹಾತ್ಮ ಗಾಂಧೀಜಿ ಅವರು ಮುನ್ನಡೆಯುತ್ತ ಅವರನ್ನು ಸಮಾಜದ ವಿವಿಧ ವರ್ಗ ಸಮುದಾಯ ಹಾಗೂ ಆರ್ಥಿಕ ಹಿನ್ನೆಲೆಯುಳ್ಳ ಹತ್ತು ಮಂದಿ ಹಿಂಬಾಲಿಸುತ್ತಿರುವುದನ್ನು ಈ ಕಲಾಕೃತಿಯು ಬಿಂಬಿಸುತ್ತದೆ, ಭಾರತದ ಸ್ವಾತಂತ್ರ್ಯದ 25ನೇ ವರ್ಷದ ನೆನಪಿನಲ್ಲಿ ಮೊದಲ ಬಾರಿಗೆ 1972 ರಲ್ಲಿ ಈ ಕಲಾಕೃತಿಯನ್ನು ನವದೆಹಲಿಯಲ್ಲಿ ಸ್ಥಾಪಿಸಲಾಯಿತು, ಶ್ರೀದೇವಿಪ್ರಸಾದ್ ಚೌಧುರಿ ಅವರು ಈ ಕಲಾಕೃತಿಯ ಸೃಷ್ಟಿ ಕರ್ತರು ಎಂದು ತಿಳಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಜಿಲ್ಲೆಯ ಮಾಜಿ ಸೈನಿಕರಾದ ಸುಬೇದಾರ್ ಬಿ. ಲಿಂಗಣ್ಣ, ಸಾರ್ಜೆಂಟ್ ಸಿ. ಪಾಂಡುರಂಗ, ಹವಾಲ್ದಾರರುಗಳಾದ ಪ್ರಸನ್ನಕುಮಾರ್, ನವೀನ್, ಗಂಗಯ್ಯ, ವಿ.ಡಿ.ನಾಗರಾಜು, ಪುಟ್ಟ ಬಾಲಯ್ಯ, ರಾಜಣ್ಣ, ಡಿ.ಎಲ್ ರಾಜಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!