ಮೋಕ್ಷ ರಥಕ್ಕೆ ಮುಕ್ತಿ ಯಾವಾಗ?

ಹಣ ಕಟ್ಟಿಲ್ಲ, ಸರ್ವೀಸ್ ಗೆ ಹೋದ ವಾಹನ ವಾಪಸ್ ಬಂದಿಲ್ಲ!

15

Get real time updates directly on you device, subscribe now.


ಕುಣಿಗಲ್: ಪುರಸಭೆಯ ಶವ ಸಾಗಾಣೆ(ಮೋಕ್ಷರಥ) ವಾಹನ ಸರ್ವೀಸ್ ಗೆಂದು ಶೋರೂಮ್ ಗೆ ಹೋಗಿದ್ದು ಬಿಲ್ ಪಾವತಿ ವಿಳಂಬವಾದ ಕಾರಣ ಶೋ ರೂಮ್ ನಲ್ಲೆ ಮೋಕ್ಷವಿಲ್ಲದೆ ಕೊಳೆಯುತ್ತಿದ್ದು ಸಂಬಂಧಪಟ್ಟವರು ಅಗತ್ಯ ಕ್ರಮ ವಹಿಸಿ ಕೂಡಲೇ ಮೋಕ್ಷ ರಥಕ್ಕೆ ಶೋರೂಂ ನಿಂದ ಮುಕ್ತಿಕೊಡಿಸಿ ನಾಗರಿಕರ ಬಳಕೆಗೆ ನೀಡುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪಟ್ಟಣವು ದಿನದಿಂದ ದಿನಕ್ಕೆ ಬೆಳೆದ ಕಾರಣ ಸುಮಾರು ಎಂಟು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಟ್ಟಣ ಹರಡಿಕೊಂಡಿದೆ, ಯಾವುದೇ ವಾರ್ಡ್ನಲ್ಲಿ ನಾಗರಿಕ ಮೃತಪಟ್ಟರೆ ಶವಾಸಾಗಾಣಿಯ ಸವಾಲಿನ ಕೆಲಸವಾಗಿದೆ.
ಇತ್ತೀಚಿನ ದಿನಗಳಲ್ಲಿ ಕಿಲೋಮೀಟರ್ ಗಟ್ಟಲೆ ಶವ ಹೊತ್ತು ಸಾಗುವುದು ತ್ರಾಸದಾಯಕವಾದ ಕಾರಣ, ಖಾಸಗಿ ಸರಕು ಸಾಗಾಣೆ ವಾಹನದ ಮೂಲಕ 2-3 ಸಾವಿರ ರೂ. ನೀಡಿ ಶವ ಸಾಗಿಸಿ ಅಂತ್ಯಕ್ರಿಯೆ ಮಾಡುವ ಅನಿವಾರ್ಯ ಸ್ಥಿತಿ ಉಂಟಾಗಿತ್ತು, ಶಾಸಕ ಡಾ.ರಂಗನಾಥ್ ಅವರಿಗೆ ನಾಗರಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ 22 ಲಕ್ಷ ವೆಚ್ಚದಲ್ಲಿ ಪುರಸಭೆಗೆ ಸುಸಜ್ಜಿತ ಮೋಕ್ಷರಥ ವಾಹನವನ್ನು ನಾಗರಿಕರ ಬಳಕೆಗೆ ಕಳೆದ ಕೆಲ ತಿಂಗಳ ಹಿಂದೆ ಪುರಸಭೆಯಿಂದ ಟೆಂಡರ್ ಮೂಲಕ ಖರೀದಿಸಿ ಹೊಚ್ಚಹೊಸ ವಾಹನ ವ್ಯವಸ್ಥೆ ಮಾಡಲಾಗಿತ್ತು, ಒಂದು ತಿಂಗಳ ಹಿಂದೆ ವಾಹನ ಸರ್ವೀಸ್ ಮಾಡಲು ಶೋ ರೂಂ ಗೆ ಕಳಿಸಲಾಗಿದ್ದು, ಈ ಮಧ್ಯೆ ಮುಖ್ಯಾಧಿಕಾರಿ ಅಮಾನತುಗೊಂಡರೆ, ವಾಹನ ಉಸ್ತುವಾರಿ ವಹಿಸಿಕೊಂಡಿದ್ದ ಪರಿಸರ ಅಭಿಯಂತರ ಕಳೆದ 13 ದಿನಗಳಿಂದ ರಜೆಯಲ್ಲಿದ್ದಾರೆ, ಸರ್ವೀಸ್ ಸೆಂಟರ್ ನಲ್ಲಿ ವಾಹನ ದುರಸ್ತಿ ವೆಚ್ಚ 14 ಸಾವಿರ ರೂಪಾಯಿಗಳಾಗಿದ್ದು ಅದನ್ನು ಪಾವತಿಸಿ ತರಲು ಒಂದೆಡೆ ಮುಖ್ಯಾಧಿಕಾರಿ ಇಲ್ಲ, ಮತ್ತೊಂದೆಡೆ ಪರಿಸರ ಅಭಿಯಂತರೂ ಇಲ್ಲ, ಸಾರ್ವಜನಿಕರ ತೆರಿಗೆ ಹಣ 22ಲಕ್ಷ ವ್ಯಯ ಮಾಡಿ ನಾಗರಿಕರ ಬಳಕೆಗೆ ತರಿಸಲಾದ ಶವ ಸಾಗಣೆ ವಾಹನ ಬಿಲ್ ಪಾವತಿಗಾಗಿ ಶೋ ರೂಂ ನಲ್ಲೆ ಕೊಳೆಯುವಂತಾಗಿದೆ.

ಈ ಮಧ್ಯೆ ಪಟ್ಟಣದ ವ್ಯಾಪ್ತಿಯಲ್ಲಿ ಮೃತಪಟ್ಟವರ ಅಂತಿಮಯಾತ್ರೆಗೆ ಖಾಸಗಿ ಸರಕು ಸಾಗಾಣೆ ವಾಹನದವರ ಮೊರೆ ಹೋಗುವಂತಾಗಿದ್ದು, ತೀರಾ ಬಡವರು ವಿಧಿ ಇಲ್ಲದೆ ಶವ ಹೊತ್ತು ಅಂತ್ಯಕ್ರಿಯೆಗೆ ಸಾಗುವ ಅನಿವಾರ್ಯ ಸ್ಥಿತಿ ಉಂಟಾಗಿದೆ, ಪುರಸಭೆಗೆ ಮುಖ್ಯಾಧಿಕಾರಿಯಾಗಿ ತಹಶೀಲ್ದಾರ್ ನೇಮಕಗೊಂಡಿದ್ದರು ಬಿಲ್ ಪಾವತಿಗೆ ಸಂಬಂಧಿಸಿದಂತೆ ಅವರಿಗೆ ಡಿಜಿಟಲ್ ಕಿ ಇನ್ನು ರಚನೆಯಾಗಿಲ್ಲ ಎಂದು ಪುರಸಭೆ ಅಧಿಕಾರಿಗಳ ಸಮಜಾಯಿಷಿ, ಒಂದು ವೇಳೆ ಡಿಜಿಟಲ್ ಕೀ ಬಂದರೂ ಉಸ್ತುವಾರಿ ವಹಿಸಿಕೊಂಡಿರುವ ಪರಿಸರ ಅಭಿಯಂತರ ರಜೆಯಲ್ಲಿರುವ ಕಾರಣ ಮೋಕ್ಷ ರಥಕ್ಕೆ ಶೋರೂಂ ನಿಂದ ಮೋಕ್ಷ ಯಾವಾಗ ಎಂಬ ಪ್ರಶ್ನೆ ಕಾಡುವಂತಾಗಿದೆ, ಕೆಲ ನಾಗರಿಕರು ಇದೆ ಅಧಿಕಾರಿಗಳು ತಮ್ಮ ಖಾಸಗಿ ವಾಹವನ್ನು ಶೋ ರೂಂನಲ್ಲಿ ಹೀಗೆ ತಿಂಗಳುಗಟ್ಟಲೆ ಬಿಡ್ತಾರೆಯೆ ಎಂದು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕರ ತೆರಿಗೆ ಹಣ ವ್ಯಯಮಾಡಿ ತರಿಸಲಾಗಿರುವ ಮೋಕ್ಷ ರಥ್ಕೆ ಮೋಕ್ಷ ಕಲ್ಪಿಸಲು ಸಂಬಂಧಪಟ್ಟವರು ಎಚ್ಚೆತ್ತು ಬಿಲ್ ಪಾವತಿಸಿ ಸಾರ್ವಜನಿಕರಿಗೆ ಸೇವೆ ದೊರಕಿಸಿ ಕೊಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!