ತುಮಕೂರು: ರಾಜರ ಆಳ್ವಿಕೆ ನಶಿಸಿದರೂ ನಮ್ಮಲ್ಲಿ ನಾಡ ಹಬ್ಬ ದಸರಾ ಆಚರಣೆಯ ವೈಭವ ವಿಶ್ವ ವಿಖ್ಯಾತವಾಗಿದೆ, ಹಬ್ಬ, ಜಾತ್ರೆಗಳು, ಧಾರ್ಮಿಕ ಉತ್ಸವಗಳಿಗೆ ರಾಜಕೀಯ ಬಣ್ಣ ಬೇಡ, ಜಾತಿ ಭೇದವಿಲ್ಲದೆ ಹಿಂದುಗಳು ಧಾರ್ಮಿಕ ಆಚರಣೆ ಆಚರಿಸಿ ನಮ್ಮ ಸಂಸ್ಕೃತಿ, ಪರಂಪರೆ ಉಳಿಸಬೇಕು ಎಂದು ಕುಂಚಿಟಿಗರ ಸಂಸ್ಥಾನ ಪೀಠದ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ದೇವಸ್ಥಾನ ಆವರಣದಲ್ಲಿ ತುಮಕೂರು ದಸರಾ ಸಮಿತಿ ಹಮ್ಮಿಕೊಂಡಿರುವ 34ನೇ ವರ್ಷದ ದಸರಾ ಉತ್ಸವ ಉದ್ಘಾಟಿಸಿದ ಸ್ವಾಮೀಜಿ, ಕೆಟ್ಟದನ್ನು ಹೋಗಲಾಡಿಸಿ ಒಳ್ಳೆಯದನ್ನು ಪಡೆಯುವ ಸಂತೇತದ ದಸರಾ ಮಹೋತ್ಸವ ನಮ್ಮ ನಾಡಿನ ವಿಶಿಷ್ಟ, ವಿಶೇಷ ಆಚರಣೆ, ಗಿಡಮರ, ಪ್ರಕೃತಿಯನ್ನೂ ದೇವರಾಗಿ ಪೂಜಿಸುವ ನಮ್ಮ ಸಂಸ್ಕೃತಿ ಜಗತ್ತಿನ ಶೇಷ್ಠ ಸಂಸ್ಕೃತಿ, ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಮೌಲ್ಯ, ಸಾರ ತಿಳಿಸಬೇಕು, ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ ದುಷ್ಟ ಪರಿಸ್ಥಿತಿ ನಮಗೆ ಬರಬಾರದು, ಹಿರಿಯರನ್ನು, ದೇಶವನ್ನು ಗೌರವಿಸುವ ರಕ್ಷಿಸುವ ಮನಸ್ಥಿತಿ ಮಕ್ಕಳಲ್ಲಿ ಬೆಳೆಸಬೇಕು, ಭಾರತೀಯ ಉಡುಗೆ ತೊಡುಗೆ ತೊಡಲು, ನಮ್ಮ ಆಚಾರ, ವಿಚಾರ ಅನುಸರಿಸಲು ತಿಳಿ ಹೇಳಬೇಕು ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸರ್ಕಾರ ಮಾಡುವ ಕೆಲಸವನ್ನು ತುಮಕೂರು ದಸರಾ ಸಮಿತಿ ಮಾಡುತ್ತಿದೆ, ಕಳೆದ 33 ವರ್ಷಗಳಿಂದ ಸತ್ಸಂಪ್ರದಾಯದಿಂದ ದಸರಾ ಕಾರ್ಯಕ್ರಮ ಆಚರಿಸಿಕೊಂಡು ಬರುತ್ತಿದೆ, ಇಂತಹ ಆಚರಣೆಗಳು ನಮ್ಮ ಧಾರ್ಮಿಕ ಶ್ರದ್ಧೆ, ರಾಷ್ಟ್ರ ಭಕ್ತಿಗೆ ಪ್ರೇರಣೆಯಾಗುತ್ತವೆ, ತಮ್ಮ ಮನೆಯ ಹಬ್ಬದಂತೆ ನೀವೆಲ್ಲರೂ ಸ್ವಯಂ ಪ್ರೇರಿತರಾಗಿ ಬಂದು ನಾಡಹಬ್ಬ ಆಚರಣೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ ವಿಚಾರ, ನಮ್ಮ ಆಚಾರ, ವಿಚಾರ ಉಳಿಸಿಕೊಂಡು ಹೋಗುವ ಕಾರ್ಯದಲ್ಲಿ ಪರಸ್ಪರ ಕೈ ಜೋಡಿಸಿ ಸಾಗಬೇಕು ಎಂದು ಹೇಳಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್ ಮಾತನಾಡಿ, ದಸರಾ ಉತ್ಸವದಲ್ಲಿ ಪ್ರತಿದಿನ ವಿವಿಧ ಸಾಂಸ್ಕೃತಿಕ, ಜಾನಪದ ಚಟುವಟಿಕೆಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ, ಮಕ್ಕಳೊಂದಿಗೆ ಬಂದು ಪಾಲ್ಗೊಂಡರೆ ಮಕ್ಕಳಲ್ಲಿ ನಮ್ಮ ಆಚರಣೆಗಳ ಮಹತ್ವ ಅರಿವಾಗುತ್ತದೆ, ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಗ್ರಾಮಾಂತರ ಕ್ಷೇತ ಶಾಸಕ ಬಿ.ಸುರೇಶ್ ಗೌಡ, ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ನೀಲಾಲಯ ನೃತ್ಯ ಕೇಂದ್ರದ ಬಾಲಾ ವಿಶ್ವನಾಥ್ ಹಾಗೂ ಸಮಿತಿಯ ಪ್ರಮುಖರು ಭಾಗವಹಿಸಿದ್ದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಾದ ಯಶೋಧಮ್ಮ, ಕಿರಣ್ ಕುಮಾರ್, ಲಲಿತಾಶ್ರೀ, ಚಿಕ್ಕರಂಗಮ್ಮ, ಅಶ್ವತ್ಥ, ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ ಅವರ ಸೇವೆ ಶ್ಲಾಸಲಾಯಿತು.
ನಂತರ ನೀಲಾಲಯ ನೃತ್ಯ ಕೇಂದ್ರದ ವಿದ್ಯಾರ್ಥಿಗಳಿಂದ ಮಹಿಷಾಸುರ ಮರ್ಧಿನಿ ನೃತ್ಯ ರೂಪಕ ಪ್ರದರ್ಶನವಾಯಿತು, ಬೆಳಗ್ಗೆ ಧಾರ್ಮಿಕ ಉತ್ಸವದ ಅಂಗವಾಗಿ ಮಹಾ ಗಣಪತಿ, ಶ್ರೀದುರ್ಗಾ ಹೋಮ, ಭೂಮಿ ಪೂಜೆ, ಧ್ವಜಾರೋಹಣ ನೆರವೇರಿಸಲಾಯಿತು.
Comments are closed.