ಕುಣಿಗಲ್: ಮಾರ್ಕೋನ ಹಳ್ಳಿ ಮತ್ತು ಮಂಗಳಾ ಜಲಾಶಯ ಅಚ್ಚುಕಟ್ಟಿಗೆ, ಅಮೃತೂರು ಸಾಲು ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಜೆಡಿಎಸ್, ಬಿಜೆಪಿ ಅಮೃತೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಖಂಡರು ನಾಲಾ ವಲಯದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಅಮೃತೂರು ಬಸ್ ನಿಲ್ದಾಣದಿಂದ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಜೆಡಿಎಸ್ ಮುಖಂಡ ಡಾ.ರವಿ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಆಗಮಿಸಿದ ಮೈತ್ರಿ ಪಕ್ಷದ ಕಾರ್ಯಕರ್ತರು, ಅಚ್ಚುಕಟ್ಟು ಪ್ರದೇಶದ ರೈತರು, ಅಮೃತೂರು ಕೆಇಬಿ ಸರ್ಕಲ್ನಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಸಭೆಯಲ್ಲಿ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ, ಅವರಿಗೆ ಕೃಷಿ ಬಗ್ಗೆ ಅನುಭವ ಇಲ್ಲ, ಬೋರ್ ವೆಲ್ ನಲ್ಲಿ ಬೆಳೆದ ಭತ್ತದ ಗದ್ದಗೆ ಹೋಗಿ ನಾಟಿ ಮಾಡಿದ ಶಾಸಕರು ರಾಗಿ ಬೆಳೆಗೆ ಯಾವಾಗ ನೀರು ಬಿಡಬೇಕು ಎಷ್ಟು ನೀರು ಬಿಡಬೇಕು ಎಂಬ ಮಾಹಿತಿ ಇಲ್ಲದೆ ಮೈತ್ರಿಪಕ್ಷ ಪ್ರತಿಭಟನೆಗೆ ಮುಂದಾದಾಗ ತರಾತುರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕೇವಲ ಕಾಂಗ್ರಸ್ ಪಕ್ಷದವರನ್ನು ಕೂರಿಸಿಕೊಂಡು ಸಭೆ ಮಾಡಿ, ರಾಗಿ ಬೆಳೆಗೆ ನೀರು ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಜಿಪಂ ಮಾಜಿ ಅಧ್ಯಕ್ಷ ಡಾ.ರವಿ, ಮಾತನಾಡಿ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ನೀರಾವರಿ ಸಲಹಾ ಸಮಿತಿ ಸಭೆ ನಡೆಯುವ ಮುನ್ನ ರೈತರು ಹೇಮಾವತಿ ಕಚೇರಿಗೆ ಪ್ರತಿಭಟನೆ ಮಾಹಿತಿ ನೀಡಲು ತೆರಳಿದ್ದು ಅಧಿಕಾರಿಗಳು ರೈತರೊಂದಿಗೆ ಅಗೌರವವಾಗಿ ನಡೆದುಕೊಂಡಿದ್ದೆ ಅಲ್ಲದೆ ನಾಲಾ ಕಾಮಗಾರಿಗೆ ಬರುವ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ನೀಡಿ ನಾಲಾ ವಲಯದ ಕಚೇರಿಯನ್ನು ಕಾಂಗ್ರೆಸ್ ಕಚೇರಿಯನ್ನಾಗಿಸಲಾಗಿದೆ, ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದರು.
ಅಮೃತೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಆನಂದ, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಮುಖಂಡರಾದ ದೀಪು, ಸುರೇಶ್, ಅನೂಪ್ ಕುಮಾರ, ಪ್ರಕಾಶ, ನಾರಾಯಣ, ಗೋವಿಂದರಾಜು, ಗವಿಯಪ್ಪ, ಕೃಷ್ಣಮೂರ್ತಿ, ಪಾಪಚ್ಚಿ, ಕುಮಾರ, ವೆಂಕಟೇಶ್, ರಾಮನಂಜಯ್ಯ, ಚೇತನಕುಮಾರ, ಕುಮಾರ ಇತರರು ಇದ್ದರು.
Comments are closed.