ಎಲ್ಲಾ ಪೌರ ಕಾರ್ಮಿಕರಿಗೂ ನಿವೇಶನ ಹಂಚಿಕೆ

ಪೌರಕಾರ್ಮಿಕರ ದಿನಾಚರಣೆಯಲ್ಲಿ ಶಾಸಕ ಟಿಬಿಜೆ ಅಭಯ

22

Get real time updates directly on you device, subscribe now.


ಶಿರಾ: ಶಿರಾ ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸುಮಾರು 142 ಪೌರ ಕಾರ್ಮಿಕರಿಗೆ ಕಲ್ಲುಕೋಟೆ ಸರ್ವೇ ನಂ.100ರಲ್ಲಿ ನಿವೇಶನ ನೀಡಬೇಕೆಂದು ಉದ್ದೇಶಿಸಿದ್ದು, ಹದಿನೈದು ದಿನಗಳ ಒಳಗಾಗಿ ಎಲ್ಲಾ ಪೌರ ಕಾರ್ಮಿಕರಿಗೂ ನಿವೇಶನ ನೀಡುವುದರ ಜೊತೆಗೆ ಪೌರ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು 7 ಲಕ್ಷ ರೂ. ಮಂಜೂರು ಮಾಡಿಸುತ್ತೇನೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಈ ಹಿಂದೆ ಸಚಿವನಾಗಿದ್ದ ಸಂದರ್ಭದಲ್ಲಿ ಶಿರಾ ನಗರಸಭಾ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಸುಮಾರು 160.25 ಎಕರೆ ಜಮೀನನ್ನು ನಿವೇಶಕ್ಕಾಗಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಅದರಲ್ಲಿ 5176 ನಿವೇಶನ ವಿಂಗಡನೆ ಮಾಡಲು ತೀರ್ಮಾನಿಸಿದ್ದೆ, ಆದರೆ ತಾಂತ್ರಿಕ ತೊಂದರೆಯಿಂದ ಅದು ಈಡೇರಲಿಲ್ಲ, ಆದರೆ ಈಗ ನೆನೆಗುದಿಗೆ ಬಿದ್ದಿದ್ದ ನಿವೇಶನ ನೀಡುವ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ್ದು ಮೊದಲಿಗೆ ಸುಮಾರು 142 ಪೌರಕಾರ್ಮಿಕರಿಗೆ ಕಲ್ಲುಕೋಟೆ ಸರ್ವೇ ನಂ.100 ರಲ್ಲಿ ನಿವೇಶನ ನೀಡಲಾಗುವುದು ಎಂದ ಅವರು ಪೌರ ಕಾರ್ಮಿಕರನ್ನು ಯಾರೂ ಸಹ ನಿಕೃಷ್ಟವಾಗಿ ಕಾಣಬಾರದು, ಜಾತಿ ಎನ್ನುವುದು ಒಂದು ಭ್ರಮೆ, ಜಾತಿಯನ್ನು ಮನುಷ್ಯರು ಸೃಷ್ಟಿ ಮಾಡಿರುವುದು, ಅದನ್ನು ಹೋಗಲಾಡಿಸುವ ಕೆಲಸ ಮಾಡಬೇಕು ಎಂದರು.

ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಮಾತನಾಡಿ, ಸ್ವಚ್ಛತೆ ಕಾಪಾಡಲು ತಮ್ಮ ಜೀವವನ್ನೇ ಪಣಕ್ಕಿಡುವ ಪೌರ ಕಾರ್ಮಿಕರು ನಿಜವಾದ ಶ್ರಮ ಜೀವಿಗಳು, ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರ, ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದೇವು ಎಂದ ಅವರು ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಆರೋಗ್ಯದ ಕಡೆ ಗಮನ ನೀಡಬೇಕು ಎಂದರು.

ಪೌರಾಯುಕ್ತ ರುದ್ರೇಶ್ ಮಾತನಾಡಿ, ಪೌರ ಕಾರ್ಮಿಕರು ನಗರದ ಸೈನಿಕರಿದ್ದಂತೆ, ಸೈನಿಕರಿದ್ದರೆ ದೇಶ ಸುರಕ್ಷತೆಯಿಂದ ಇರುತ್ತದೆ, ಅದೇ ರೀತಿ ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯವಾಗಿರುತ್ತದೆ ಎಂದ ಅವರು ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನು ದೇಶಕ್ಕೆ ಕೊಡುಗೆ ನೀಡಿ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನಿವೃತ್ತ ಪ್ರಾಂಶುಪಾಲ ಡಾ.ವೇಣುಗೋಪಾಲ್, ನಗರಸಭೆ ಸದಸ್ಯರಾದ ಅಜಯ್ ಕುಮಾರ್, ಬುರಾನ್ ಮೊಹಮದ್, ಉಮಾ ವಿಜಯರಾಜ್, ಗಿರಿಜಾ ವಿಜಯಕುಮಾರ್, ಜಾಫರ್, ಬಿ.ಎಂ.ರಾಧಾಕೃಷ್ಣ, ಸುಶಿಲಾ ವಿರೂಪಾಕ್ಷ, ಮಹೇಶ್, ದೃವಕುಮಾರ್, ಶಿರಾ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಮಾಜಿ ತಾಪಂ ಸದಸ್ಯೆ ಮಂಜುಳಾ ಬಾಯಿ, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದೀನ್, ಜಯಲಕ್ಷ್ಮಿ, ಮಂಜುನಾಥ್, ನಗರಸಭೆ ಕಂದಾಯ ಅಧಿಕಾರಿ ಮಂಜುನಾಥ್, ಪರಿಸರ ಅಭಿಯಂತರರಾದ ಪಲ್ಲವಿ, ಕಂಪ್ಯೂಟರ್ ಪ್ರೋಗ್ರಾಮರ್ ಚಿದಾನಂದ್, ಆರೋಗ್ಯ ನಿರೀಕ್ಷಕ ಜಗನ್ನಾಥ್, ಮುಖಂಡ ನಸ್ರುಲ್ಲಾ ಖಾನ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!