ತುಮಕೂರು: ದಲಿತ ಸಂಘರ್ಷ ಸಮಿತಿ ಹುಟ್ಟಿದ ಕಾಲಕ್ಕು, ಇಂದಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಶೋಷಿತರ ನಡುವೆ ಇರುವ ಅಸಹನೆ ಹೋಗಲಾಡಿಸಿ ಸೌಹಾರ್ಧತೆ ಮೂಡಿಸದಿದ್ದರೆ ಸಮ ಸಮಾಜ ನಿರ್ಮಾಣದ ದಲಿತ ಸಂಘರ್ಷ ಸಮಿತಿಯ ಕನಸು ನನಸಾಗಲು ಸಾಧ್ಯವಿಲ್ಲ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಕೆಪಿಎಸ್ ಶಾಲಾ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ವತಿಯಿಂದ ಆಯೋಜಿಸಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಉದ್ಘಾಟಿಸಿ ಮಾತನಾಡಿ, ಎಲ್ಲರನ್ನು ಒಳಗೊಂಡಾಗ ಮಾತ್ರ ಸಮಾನತೆಯ ರಥ ಮುಂದೆ ಸಾಗಲು ಸಾಧ್ಯ, ಇದೇ ಅಂಬೇಡ್ಕರ್ ಅವರ ಆಶಯವೂ ಆಗಿತ್ತು, ಮೀಸಲಾತಿಯನ್ನು ಕೆಲವೇ ಜಾತಿಗಳು ಕಬಳಿಸುತ್ತಿವೆ, ಪರಿಶಿಷ್ಟರ 101 ಜಾತಿಗಳಲ್ಲಿ 101ನೇ ಜಾತಿಗೂ ಅದರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಲಭ್ಯವಾಗಬೇಕು, ಹಾಗೆಯೇ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡಗಳಲ್ಲಿಯೂ ಮೀಸಲಾತಿ ಅಲ್ಲಿನ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು, ಇದನ್ನೇ ಅಂಬೇಡ್ಕರ್ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಎಂದು ಪ್ರತಿಪಾದಿಸಿದ್ದರು ಎಂದರು.
ದಲಿತ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಪತ್ನಿ ಇಂದಿರಾ ಕೃಷ್ಣಪ್ಪ ಮಾತನಾಡಿ, ಇಂದಿನ ರಾಜ್ಯಮಟ್ಟದ ಮಹಾ ಅಧಿವೇಶನ 50 ವರ್ಷಗಳ ದಸಂಸದ ಇದುವರೆಗಿನ ಸಾಧನೆ ಮತ್ತು ಮುಂದಿನ ನಡೆಗಳ ಕುರಿತು ಪುನರವಲೋಕನ ಮಾಡಿಕೊಳ್ಳುವ ವೇದಿಕೆಯಾಗಿದೆ, ನಾವು ನಡೆದು ಬಂದ ದಾರಿಯನ್ನು ಅವಲೋಕಿಸುತ್ತಲೇ ನಮ್ಮ ಮುಂದಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ದಾರಿ ಕಂಡುಕೊಳ್ಳಬೇಕಿದೆ, ಆರ್ಥಿಕ ಅಸಮಾನತೆ, ಏಕಮುಖ ಚಲನೆ, ಸಂವಿಧಾನದ ವಿರೋಧಿ ನಡೆಗಳು, ಮನುವಾದದ ಸ್ಥಾಪನೆಯ ವಿರುದ್ಧ ಎಲ್ಲರನ್ನು ಸಂಘಟಿಸಿ ಮುನ್ನೆಡೆಸುವ ಸವಾಲು ನಮ್ಮ ಮುಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ವಹಿಸಿದ್ದರು, ಹಿರಿಯರಾದ ಕೆ.ದೊರೆರಾಜು, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ, ಹಿರಿಯ ದಸಂಸ ಮುಖಂಡ ಕುಂದೂರು ತಿಮ್ಮಯ್ಯ, ಡಾ.ಬಸವರಾಜು, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುರುಳಿ ಕುಂದೂರು, ಚೇಳೂರು ಶಿವನಂಜಪ್ಪ, ಗಾನ ಅಶ್ವಥ್, ಮಲ್ಲೇಶ್ ಅಂಬುಗ, ನಾಗಣ್ಣ ಬಡಿಗೇರ, ಅರ್ಜುನ್ ಗೊಬ್ಬುರ್ ಇತರರು ಇದ್ದರು.
Comments are closed.