ತುಮಕೂರು: ಹೊಸ ಸಂಶೋಧನೆಗಳನ್ನು ಮಾಡುವಾಗ ಅನೇಕ ಸವಾಲು ಹಾಗೂ ಸೋಲುಗಳು ಎದುರಾಗುತ್ತವೆ, ಈ ಸವಾಲುಗಳಿಗೆ ಹೆದರದೆ ಮೆಟ್ಟಿನಿಂತು ಮುನ್ನಡೆದಾಗ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಬಾಹ್ಯಾಕಾಶ ಇಲಾಖೆ ಮಾಜಿ ಕಾರ್ಯದರ್ಶಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ, ವಿಕ್ರಮ್ ಸಾರಾಭಾಯ್ ಪ್ರಾಧ್ಯಾಪಕ ಡಾ.ಕೆ.ಶಿವನ್ ಹೇಳಿದರು.
ನಗರದ ಎಸ್ ಐಟಿ ಕಾಲೇಜಿನ ಆವರಣದಲ್ಲಿ ನಡೆದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವ ಬದಲು ಸಂಶೋಧನಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಇಸ್ರೋ ಸಂಸ್ಥೆಯಿಂದ ನಡೆದ ಚಂದ್ರಯಾನ ಸಂದರ್ಭದಲ್ಲಿ ಅನೇಕ ಸವಾಲು ಎದುರಾದವು, ಜೊತೆಗೆ ಸೋಲು ಉಂಟಾದವು, ಆದರೂ ವಿಜ್ಞಾನಿಗಳು ಎದೆಗುಂದದೆ ಪ್ರಯತ್ನ ಮುಂದುವರೆಸಿದರ ಫಲಯಾಗಿ ಚಂದ್ರಯಾನ-2 ಯಶಸ್ವಿಯಾಯಿತು, ಹಾಗೆಯೇ ವಿದ್ಯಾರ್ಥಿಗಳು ಸೋಲನ್ನು ಪಾಠವೆಂದು ಪರಿಗಣಿಸಿ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಶ್ರೀಮಠದ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಅನೇಕ ಬದಲಾವಣೆಯಾಗಿದ್ದು, ಯಾವುದೇ ಕಷ್ಟಕರ ಸನ್ನಿವೇಶ ಎದುರಿಸಲು ಶಕ್ತಿ ಬರುತ್ತದೆ ಎಂದ ಅವರು ಎಸ್ ಐಟಿ ಕಾಲೇಜು ಕೇವಲ ವಿದ್ಯಾಭ್ಯಾಸ, ಭಾಷಣ, ತರಗತಿ ಪಾಠಕ್ಕೆ ಸೀಮಿತವಾಗದೆ ನಿಮ್ಮನ್ನು ಉತ್ತಮ ಪ್ರಜೆಯಾಗಿ ರೂಪಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಎಸ್ ಐಟಿ ಸಿಇಓ ಡಾ.ಶಿವಕುಮಾರಯ್ಯ, ಪ್ರಾಂಶುಪಾಲ ಪ್ರೊ. ಎಸ್.ವಿ. ದಿನೇಶ್, ಮಾಲತಿ ಶಿವನ್, ಟಿ.ಎಂ.ಸ್ವಾಮಿ ಸೇರಿದಂತೆ ಕಾಲೇಜಿನ ಬೋಧಕ ವರ್ಗ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
Comments are closed.