ಕುಣಿಗಲ್: ಮುಜರಾಯಿ ದೇವಾಲಯ ಹುಂಡಿ ಮುಟ್ಟಿದ್ದಲ್ಲದೆ ದೇವಾಲಯ ಆವರಣದಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ದೇವಾಲಯದ ಅರ್ಚಕ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆಂದು ವ್ಯಕ್ತಿ ನೀಡಿದ ದೂರಿನ ಮೇರೆಗೆ ಅರ್ಚಕನ ಮೇಲೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.
ಬಾದಿತ ವ್ಯಕ್ತಿಯನ್ನು ತಾಲೂಕಿನ ಮೆಣಸಿನಹಳ್ಳಿಯ ಪಾರ್ಥರಾಜು ಎಂದು ಗುರುತಿಸಲಾಗಿದೆ, ಈತ ನೀಡಿರುವ ದೂರಿನಲ್ಲಿ ಈತ ಬೆಟ್ಟದರಂಗನಾಥ ಸ್ವಾಮಿ ದೇವಾಲಯಕ್ಕೆ ಖಾಸಗಿ ಕಂಪನಿಯವರು ಸೆಕ್ಯೂರಿಟಿ ಗಾರ್ಡ್ ಆಗಿ ನಿಯೋಜಿಸಿದ್ದ ಮೇರೆಗೆ ಕೆಲಸ ಮಾಡುತ್ತಿದ್ದು, ಈತ ದೇವಾಲಯದ ಹುಂಡಿಯನ್ನು ಅ.5 ರನ್ನು ಎತ್ತಿ ಒಳಗಡೆ ಇಟ್ಟಿದ್ದು ಇದಕ್ಕೆ ದೇವಾಲಯ ಅರ್ಚಕ ರಾಕೇಶ್ ಹುಂಡಿ ಮುಟ್ಟದಂತೆ ತಾಕೀತು ಮಾಡಿದ್ದಲ್ಲದೆ ದೇವಾಲಯದ ಒಳಗೆ ಬರಬಾರದು ಎಂದು ಜಾತಿ ನಿಂದನೆ ಮಾಡಿದ್ದು, ಅ.6ರ ಮಧ್ಯಾಹ್ನ ದೇವಾಲಯದ ಆವರಣದಲ್ಲಿ ಕುಳಿತಿರುವಾಗ ಇದೆ ಅರ್ಚಕ ವಿನಾಕಾರಣ ನಿಂದಿಸಿ ದೊಣ್ಣೆಯಿಂದ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆಂದು ನೀಡಿದ ದೂರಿನ ಮೇರೆಗೆ ಅರ್ಚಕ ರಾಕೇಶ್ ಮೇಲೆ ಜಾತಿ ನಿಂದನೆ ಸೇರಿದಂತೆ ಇತರೆ ಪ್ರಕರಣ ದಾಖಲಿಸಿರುವ ಕುಣಿಗಲ್ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಈ ಮಧ್ಯೆ ಅರ್ಚಕ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮುಜರಾಯಿ ದೇವಾಲಯದ ಅರ್ಚಕನ ನಡೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ, ಇದೇ ದೇವಾಲಯದಲ್ಲಿ ಮಹಿಳೆಯೊಬ್ಬರೊಂದಿಗೆ ಅರ್ಚಕನೊಬ್ಬ ಅಸಭ್ಯರೀತಿಯಲ್ಲಿ ವಾಗ್ವಾದ ನಡೆಸಿರುವ ಸಹ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮುಜರಾಯಿ ದೇವಾಲಯದಲ್ಲಿ ಕೆಲ ಅರ್ಚಕರ ತಾರತಮ್ಯ ಧೋರಣೆ ಬಗ್ಗೆ ಭಕ್ತಾದಿಗಳು ಅಸಮಾಧಾನ ವ್ಯಕ್ತಪಡಿಸಿ ಸಂಬಂಧಪಟ್ಟ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಗಳು ಅರ್ಚಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Comments are closed.