ತುಮಕೂರು: ದಸರಾ ಉತ್ಸವ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 11 ರಂದು ಬೆಳಗ್ಗೆ 6.30 ಗಂಟೆಗೆ ಮಿನಿ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಸರಾ ಉತ್ಸವದ ಅಂಗವಾಗಿ ಈ ಮ್ಯಾರಾಥಾನ್ ಆಯೋಜಿಸಲಾಗಿದ್ದು, ಮ್ಯಾರಥಾನ್ ನಲ್ಲಿ ಎಲ್ಲಾ ವಯೋಮಾನದವರು ಪಾಲ್ಗೊಳ್ಳಬಹುದಾಗಿದೆ, ಮ್ಯಾರಥಾನ್ ಅಂದು ಬೆಳಗ್ಗೆ 6.30 ಗಂಟೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಡಾ.ಶಿವಕುಮಾರ ಸ್ವಾಮೀಜಿ ವೃತ್ತ, ಎಸ್ ಐಟಿ ಕಾಲೇಜು, ಗಂಗೋತ್ರಿ ರಸ್ತೆ, ಎಸ್.ಎಸ್.ಪುರಂ ಮುಖ್ಯರಸ್ತೆ, ಭದ್ರಮ್ಮ ಚೌಲ್ಟ್ರಿ, ಬಿಜಿಎಸ್ ಸರ್ಕಲ್, ಕಾಲ್ ಟ್ಯಾಕ್ಸ್, ಗುಬ್ಬಿ ಗೇಟ್, ದಿಬ್ಬೂರು ಕ್ರಾಸ್, ಡಬಲ್ ರೋಡ್, ಅಮಾನಿಕೆರೆ ರಸ್ತೆ, ಡಿಸಿ ಕಚೇರಿ ರಸ್ತೆ, ಕೆಇಬಿ ಚೌಲ್ಟ್ರಿ, ಕೋತಿ ತೋಪು ವೃತ್ತ, ತಮ್ಮಯ್ಯ ಹಾಸ್ಪಿಟಲ್ ವೃತ್ತದ ಮೂಲಕ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದರು.
ಮ್ಯಾರಥಾನ್ ನಲ್ಲಿ ಪಾಲ್ಗೊಂಡ ವಿಜೇತ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ನೀಡಲಾಗುವುದು, ನಿಗದಿತ ಮಾರ್ಗ ತಲುಪಿದ ಮೊದಲ 6 ಪುರುಷ ಹಾಗೂ 6 ಮಹಿಳಾ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ, ನಾಲ್ಕು, ಐದು ಹಾಗೂ ಆರನೇ ನಗದು ಬಹುಮಾನದೊಂದಿಗೆ ಪಾರಿತೋಷಕ ನೀಡಲಾಗುವುದು, ಮ್ಯಾರಥಾನ್ ನಲ್ಲಿ ಪಾಲ್ಗೊಂಡ ಎಲ್ಲರಿಗೂ ಇ- ಪ್ರಮಾಣಪತ್ರ ಹಾಗು ಟೀ- ಷರ್ಟ್, ಕ್ಯಾಪ್ ಗಳನ್ನು ವಿತರಿಸಲಾಗುವುದೆಂದು ತಿಳಿಸಿದರು.
ಮ್ಯಾರಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಪಾಲ್ಗೊಂಡು ಯಶಸ್ವಿಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಲಿಂಗರಾಜು.ಡಿ.ಕೆ. ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಕಾರ್ಮಿಕ ಅಧಿಕಾರಿ ತೇಜಾವತಿ, ಡಿವೈಎಸ್ ಪಿ ಚಂದ್ರಶೇಖರ್, ವಿವಿಧ ಕ್ರೀಡಾ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
Comments are closed.