ತುಮಕೂರು: ತುಮಕೂರು ವಿಶ್ವವಿದ್ಯಾಲಯವು ಒಂದೆರಡು ದಿನದಲ್ಲಿ ನೂತನ ಬಿದರಕಟ್ಟೆ ಕ್ಯಾಂಪಸ್ ನ ವಿಶಾಲ 350 ಎಕರೆ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದ್ದು ನೂತನ ಕ್ಯಾಂಪಸ್ ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಿಂದ ಬಸ್ ಸಂಚಾರಕ್ಕೆ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡರು ಬುಧವಾರ ಚಾಲನೆ ನೀಡಿದರು.
ತುಮಕೂರು ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶ್ವವಿದ್ಯಾಲಯದ ವಿವಿಧ ಇಲಾಖೆಗಳನ್ನು ಬಿದರಕಟ್ಟೆಯ ನೂತನ ಕ್ಯಾಂಪಸ್ ಗೆ ಸ್ಥಳಾಂತರ ಮಾಡಲಾಗುತ್ತಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೃದಯ ಭಾಗದಲ್ಲಿ ಇರುವ ಈ ಕ್ಯಾಂಪಸ್ ಗೆ ಜಾಗ ಒದಗಿಸಲು ತಾವು ಶ್ರಮಿಸಿದ್ದನ್ನು ಈ ಸಂದರ್ಭದಲ್ಲಿ ಶಾಸಕರು ನೆನಪಿಸಿಕೊಂಡರು, ಇದೇ 14 ರಂದು ನೂತನ ಕ್ಯಾಂಪಸ್ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರವು ತುಮಕೂರಿಗೆ ಕೇವಲ ವಿಶ್ವ ವಿದ್ಯಾಲಯವನ್ನು ಮಂಜೂರು ಮಾಡಿತ್ತು, ಅದಕ್ಕೆ ಅಗತ್ಯವಾದ ಜಮೀನು ಅಥವಾ ಯಾವುದೇ ಮೂಲ ಸೌಲಭ್ಯ ಒದಗಿಸಿರಲಿಲ್ಲ, ತಮ್ಮ ಸರ್ಕಾರ ಬಂದ ಮೇಲೆ ನಿರಂತರ ಪ್ರಯತ್ನದ ನಂತರ ಬಿದರಕಟ್ಟೆಯಲ್ಲಿ ಜಮೀನು ಮಂಜೂರಾಯಿತು ಎಂದು ತಿಳಿಸಿದರು.
ಈ ವಿಶಾಲ ಕ್ಯಾಂಪಸ್ ಗೆ ಬುಧವಾರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಅರ್ಧ ಗಂಟೆಗೆ ಒಮ್ಮೆಯಂತೆ ಓಡಿಸಲಾಗವುದು, ಅದರಿಂದ ವಿಶ್ವ ವಿದ್ಯಾಲಯಕ್ಕೆ ಹೋಗುವ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನಾಗವಲ್ಲಿ, ಹೆಬ್ಬೂರು, ಗೂಳೂರು, ಬಳ್ಳಗೆರೆ, ಗಂಗೋನಹಳ್ಳಿ, ಸಿರಿವರ, ಕಣಕುಪ್ಪೆ, ಅರಿಯೂರು ಭಾಗಗಳಿಗೆ ಈ ಬಸ್ ಸಂಚಾರದಿಂದ ಪ್ರಯೋಜನವಾಗಲಿದೆ ಎಂದರು.
ಉದ್ಘಾಟನಾ ಬಸ್ ನಲ್ಲಿ ಶಾಸಕರು, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ವಿದ್ಯಾರ್ಥಿಗಳು ನೂತನ ಕ್ಯಾಂಪಸ್ ಗೆ ಪ್ರಯಾಣಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಂಕರ ಬಿಜೆಪಿ ಮುಖಂಡ ಪ್ರಭಾಕರ ಸೇರಿದಂತೆ ರಿಜಿಸ್ಟ್ರಾರ್ ಹಾಜರಿದ್ದರು.
Comments are closed.