ತುಮಕೂರು: ರೈಲು ಪ್ರಯಾಣಿಕರನ್ನು ಸಾಂಸ್ಕೃತಿಕ ಮನಸುಗಳನ್ನು ಒಗೂಡಿಸಿ, ಅವರ ಕುಂದು ಕೊರತೆಗಳನ್ನು ರೈಲ್ವೆ ಅಧಿಕಾರಿಗಳ ಮೂಲಕ ಬಗೆಹರಿಸಿ ಪ್ರಯಾಣಿಕರ ಹಿತ ಕಾಪಾಡಿಕೊಂಡು ಬರುತ್ತಿರುವ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಗೆ ಈಗ ದಶಮಾನೋತ್ಸವ ಆಚರಿಸುತ್ತಿದೆ.
ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಈ ತಿಂಗಳ 13 ರಂದು ಭಾನುವಾರ ಬೆಳಗ್ಗೆ 9.30ಕ್ಕೆ ನಗರದ ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ, ಕೇಂದ್ರದ ಜಲಶಕ್ತಿ ಮತ್ತು ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಈ ಸಂದರ್ಭವನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಜಿಲ್ಲೆಯ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳೊಂದಿಗೆ ವೇದಿಕೆ ಚರ್ಚಿಸಿ ಜಿಲ್ಲೆಯಲ್ಲಿ ಆಗಬೇಕಿರುವ ರೈಲ್ವೇ ಯೋಜನೆಗಳ ಬಗ್ಗೆ ಸಿದ್ಧಪಡಿಸಿರುವ ಕಿರು ಪುಸ್ತಕವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಿಡುಗಡೆಗೊಳಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಶಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ಜಯಪ್ರಕಾಶ್ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸುವರು ಎಂದರು.
ಈ ವೇಳೆ ಮಾಜಿ ಸಂಸದರಾದ ಜಿ.ಎಸ್.ಬಸವರಾಜು, ಎಸ್.ಪಿ.ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಡಾ.ರಫಿಕ್ ಅಹಮದ್ ಮತ್ತು ನೈಋತ್ಯ ರೈಲ್ವೆ ಚೀಫ್ ಕಮರ್ಷಿಯಲ್ ಮ್ಯಾನೇಜರ್ ಡಾ.ಅನೂಪ್ ದಯಾನಂದ್ ಸಾಧು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರೈಲಿನ ಬಗ್ಗೆ ಆಸಕ್ತಿ ಹೆಚ್ಚಿಸಲು ದಶಮಾನೋತ್ಸವದ ಅಂಗವಾಗಿ ತುಮಕೂರು ನಗರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗಿರುವ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗುವುದು,
ವೇದಿಕೆ ಉಪಾಧ್ಯಕ್ಷ ಪರಮೇಶ್, ಮಾಧವ ಮೂರ್ತಿ, ಖಜಾಂಚಿ ಆರ್.ಬಾಲಾಜಿ, ನಿರ್ದೇಶಕರಾದ ಸಿ.ನಾಗರಾಜ್, ರವಿಶಂಕರ್ ಹಾಜರಿದ್ದರು.
Comments are closed.