ಎರಡು ದಿನ ದಸರಾ ಸಾಂಸ್ಕೃತಿಕ ಮೆರುಗು: ಡೀಸಿ

23

Get real time updates directly on you device, subscribe now.


ತುಮಕೂರು: ತುಮಕೂರು ದಸರಾ ಉತ್ಸವದ ಅಂಗವಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಅಮರ ಶಿಲ್ಪಿ ಜಕಣಾಚಾರಿ ಬೃಹತ್ ವೇದಿಕೆಯಲ್ಲಿ ಅಕ್ಟೋಬರ್ 11 ಹಾಗೂ 12ರಂದು ಪ್ರತಿ ದಿನ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದಸರಾ ಉತ್ಸವದ ಮೆರುಗು ಇನ್ನಷ್ಟು ಹೆಚ್ಚಿಸಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಗೃಹ ಸಚಿವರಿಂದ ಕಾರ್ಯಕ್ರಮಗಳಿಗೆ ಚಾಲನೆ
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಡಾ.ಶಿವಕುಮಾರ ಸ್ವಾಮೀಜಿ ಧಾರ್ಮಿಕ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾಗೌರಿ (ಮಹಾಕಾಳಿ) ಅಲಂಕಾರದಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ತುಮಕೂರು ದಸರಾ ಪ್ರಯುಕ್ತ ಅಕ್ಟೋಬರ್ 11ರ ಆಯುಧ ಪೂಜೆ ದಿನದಂದು ಏರ್ಪಡಿಸಿರುವ ಮ್ಯಾರಾಥಾನ್, ನಾಡಕುಸ್ತಿ, ಆಹಾರ ಮೇಳ, ವಸ್ತು ಪ್ರದರ್ಶನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಕ್ರೀಡಾ ದಸರಾ ಉತ್ಸವದಲ್ಲಿ ಅಕ್ಟೋಬರ್ 11ರ ಬೆಳಗ್ಗೆ 7 ಗಂಟೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಮ್ಯಾರಾಥಾನ್ ಓಟ ಏರ್ಪಡಿಸಲಾಗಿದ್ದು, ಕ್ರೀಡಾಪಟುಗಳು, ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!