ತುಮಕೂರು: ಉನ್ನತ ಶಿಕ್ಷಣವು ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಬೌದ್ಧಿಕ ಸೃಜನಶೀಲತೆ ಹಾಗೂ ಕೌಶಲ್ಯಾಧಾರಿತ ಕುತೂಹಲ ಬೆಳೆಸುವ ಶಿಕ್ಷಣವಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಎ.ಶೇಖರ್ ಅಭಿಪ್ರಾಯಪಟ್ಟರು.
ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯದ 2024-25 ನೇ ಸಾಲಿನ ಮೂರನೇ ವರ್ಷದ ಎಂಬಿಬಿಎಸ್ ತರಗತಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಸದಾ ಆತ್ಮವಿಶ್ವಾಸ ಹಾಗೂ ಆಶಾವಾದತನ ಹೊಂದಿ ತಾವು ಮಾಡುವ ಪ್ರತಿ ಕೆಲಸದಲ್ಲಿ ಉನ್ನತಿ ಸಾಧಿಸುವತ್ತ ಮುನ್ನುಗ್ಗಬೇಕು ಎಂದರು.
ಸಿದ್ದಗಂಗಾ ವೈದ್ಯಕೀಯ ಕಾಲೇಜಿನ ಸಲಹೆಗಾರರು, ರಾಮಯ್ಯ ಮೊಮೋರಿಯಲ್ ಆಸ್ಪತ್ರೆಯ ಅಧ್ಯಕ್ಷ ಡಾ.ನಾಗೇಂದ್ರ ಸ್ವಾಮಿ ಮಾತನಾಡಿ ರೋಗಿಯ ಖಾಯಿಲೆ ಕೇವಲ ದೇಹಕ್ಕೆ ಮಾತ್ರ ಅನ್ವಯಿಸುವಂತಹದ್ದಲ್ಲ, ಅದು ರೋಗಿಯ ಮಾನಸಿಕ ಹಾಗೂ ಆಧ್ಮಾತ್ಮಿಕತೆಗೂ ಸಂಬಂಧಿಸಿದ್ದಾಗಿರುತ್ತದೆ, ವೈದ್ಯರಾದವರು ರೋಗಿಯನ್ನು ಸರ್ವ ತೋಮುಖವಾಗಿ ಗುಣಪಡಿಸುವಂತಹ ಜವಾಬ್ದಾರಿ ಹೊರಬೇಕು ಎಂದರು.
ಸಿದ್ದಗಂಗಾ ಮಠದ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ ಸಿದ್ಧಗಂಗಾ ಮಠ ಆರೋಗ್ಯ ದಾಸೋಹದ ಮೂಲಕ ಅಶಕ್ತರ ಹಾಗೂ ಬಡವರ ಆರೋಗ್ಯ ಕಾಳಜಿಗಾಗಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಿದೆ, ವೈದ್ಯಕೀಯ ಸೇವೆ ಹಾಗೂ ಗುಣಮಟ್ಟದಲ್ಲಿ ರಾಜಿಯಾಗದ ನಮ್ಮ ವೈದ್ಯಕೀಯ ಕಾಲೇಜಿನ ಎಲ್ಲಾ ಸೌಲಭ್ಯ ಬಳಸಿಕೊಂಡು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಅಧ್ಯಯನಶೀಲರಾಗಬೇಕು ಎಂದರು.
ಸಾನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ಮಾತನಾಡಿ, ನಮ್ಮ ವೈದ್ಯಕೀಯ ಕಾಲೇಜಿನ ಬಗ್ಗೆ ಪೋಷಕರ ವಲಯದ ಪ್ರಶಂಸೆಗಳನ್ನು ಕೇಳಿ ಸಂತಸವಾಗಿದೆ, ವೈದ್ಯಕೀಯ ಶಿಕ್ಷಣವೆನ್ನುವುದು ಕೇವಲ ವೈದ್ಯಕೀಯ ಜ್ಞಾನವನ್ನಷ್ಟೇ ನೀಡುವುದಲ್ಲದೆ ನಮ್ಮ ಶೈಕ್ಷಣಿಕ ಹಾಗೂ ಮಾನಸಿಕ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕು, ವೈದ್ಯಕೀಯ ವಿದ್ಯಾರ್ಥಿಗಳು ಸದೃಢವಾದ ಮನಸ್ಸಿಟ್ಟುಕೊಂಡು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿ ಉತ್ತಮ ವೈದ್ಯರಾಗಬೇಕು ಎಂದರು.
ಮೂರನೇ ವರ್ಷದ ಎಂಬಿಬಿಎಸ್ ತರಗತಿಗಳಿಗೆ ದಾಖಲಾದ 150 ವಿದ್ಯಾರ್ಥಿಗಳಿಗೆ ವೈಟ್ ಕೋಟ್ ನೀಡುವ ಮೂಲಕ ಸ್ವಾಗತಿಸಲಾಯಿತು, ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸೇವೆಗಳ ಕಾರ್ಯದರ್ಶಿ ಟಿ.ಎಂ.ಸ್ವಾಮಿ ಮಾತನಾಡಿದರು. ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಕಾರ್ಯಕಾರಿ ನಿರ್ದೇಶಕ ಡಾ.ಎಸ್.ಸಚ್ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಸಿದ್ಧಗಂಗಾ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಎಸ್.ಪರಮೇಶ್, ಪ್ರಾಚಾರ್ಯ ಡಾ.ಶಾಲಿನಿ.ಎಂ, ವೈದ್ಯಕೀಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ.ಬಿ. ಹಾಗೂ ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ.ಭಾನುಪ್ರಕಾಶ್.ಹೆಚ್.ಎಂ, ಸಿಇಓ ಡಾ.ಸಂಜೀವಕುಮಾರ್ ಹಾಜರಿದ್ದರು.
Comments are closed.