ಗುಬ್ಬಿ: ಆಲದ ಕೊಂಬೆ ಅಮ್ಮನವರ ಬಾರೆ ದೇವಸ್ಥಾನದ ಅನುಭವದಲ್ಲಿರುವ 12 ಎಕರೆ ಭೂಮಿಯಲ್ಲಿ ನ್ಯಾಯಾಲಯದ ಕಟ್ಟಡಕ್ಕೆ ಹಾಗೂ ಬೇರೆಯವರಿಗೆ ನೀಡುತ್ತಿರುವುದನ್ನ ವಿರೋಧಿಸಿ 33 ಗ್ರಾಮಗಳ ಭಕ್ತಾದಿಗಳು ಆಲದ ಕೊಂಬೆ ಅಮ್ಮನವರ ದೇವಾಲಯದ ಮುಂದೆ ಸಭೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಸ್.ಆರ್.ಶ್ರೀನಿವಾಸ್ ಪುರಾತನ ಕಾಲದಿಂದಲೂ ಈ ಭಾಗದಲ್ಲಿನ ಜನರು ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದು, ತಮ್ಮದೇ ಆದಂತಹ ಧಾರ್ಮಿಕ ಭಾವನೆಗಳ ಜೊತೆಯಲ್ಲಿ ಸಾಗುತ್ತಿದ್ದಾರೆ, ಹಬ್ಬ ಹರಿದಿನ ಜಾತ್ರೆಗಳನ್ನು ಇಲ್ಲಿ ಮಾಡುತ್ತಿದ್ದು ದೇವಾಲಯಕ್ಕೆ ಜಾಗ ಉಳಿಸುವ ಕೆಲಸಕ್ಕೆ ಖಂಡಿತವಾಗಿಯೂ ಬದ್ಧವಾಗಿದ್ದು ಟ್ರಸ್ಟ್ ರಚನೆ ಮಾಡಿ ಅದರ ಮೂಲಕ ದೇವಾಲಯಕ್ಕೆ ಅಗತ್ಯವಿರುವ ಭೂಮಿಯನ್ನ ಸರ್ಕಾರದ ಜೊತೆಯಲ್ಲಿ ಮಾತನಾಡಿ ದೇವಾಲಯಕ್ಕೆ ಬಿಡುತ್ತೇವೆ ಎಂದು ತಿಳಿಸಿದರು.
ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, 33 ಹಳ್ಳಿಗಳಿಗೆ ಸೇರಿರುವ ಆಲದ ಕೊಂಬೆ ಅಮ್ಮನವರ ಜಾಗವನ್ನು ಸರಕಾರ ಹಾಗೂ ತಾಲೂಕು ಆಡಳಿತ ಬೇರೆ ಯಾವುದೇ ಕಾರ್ಯಕ್ಕೆ ಬಳಸದೆ ದೇವಾಲಯಕ್ಕೆ ನೀಡಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ರೇಣುಕ ಪ್ರಸಾದ್ ಮಾತನಾಡಿ, ಮೂರು ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತಿದ್ದು 33 ಹಳ್ಳಿಯ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ, ಹಾಗಾಗಿ ಈ ಜಾಗವು ಧಾರ್ಮಿಕ ಪರಂಪರೆಯಿಂದ ಕೊಡಿದ್ದು ಈ ಜಾಗವನ್ನು ದೇವಾಲಯಕ್ಕೆ ಬಿಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಹುಚ್ಚಪ್ಪಾಜಿ ಅರಸ್ ಸೇರಿದಂತೆ 33 ಹಳ್ಳಿಯ ಭಕ್ತರು, ಹಲವು ಸಮುದಾಯದ ಮುಖಂಡರು ಭಾಗಿಯಾಗಿದ್ದರು.
Comments are closed.