ತುಮಕೂರು: ಜಿಲೆಟಿನ್ ಸ್ಪೋಟದಿಂದ ನಗರದ ಗಂಗಾ ಆಸ್ಪತ್ರೆಗೆ ದಾಖಲಾಗಿದ್ದ ಜಿಲ್ಲೆಯ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮೋನಿಶ್ ಗೌಡ ಅವರನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ಮಾಡಿ ಧೈರ್ಯ ತುಂಬಿದರು.
ಶಾಲೆಯಲ್ಲಿ ದಸರಾ ರಜೆ ಹಿನ್ನೆಲೆ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಯುತ್ತಿದ್ದು, ಅಕ್ಟೋಬರ್ 9ರಂದು ವಿಶೇಷ ತರಗತಿಗೆಂದು ತೆರಳಿದ್ದ ಮೋನಿಶ್ ಗೌಡ ಅವರು ಶಾಲೆ ಸಮೀಪ ಕಲ್ಲಿನ ರಾಶಿ ಬಳಿಯಿದ್ದ ಜಿಲೆಟಿನ್ ಕಡ್ಡಿಯನ್ನು ಕುತೂಹಲದಿಂದ ತೆಗೆದುಕೊಂಡ ವೇಳೆ ಸ್ಫೋಟ ಸಂಭವಿಸಿದ್ದು, ಸ್ಪೋಟದಿಂದ ಮೋನಿಶ್ ಗೌಡನ ಬಲಗೈನ ಮೂರು ಬೆರಳು ತುಂಡಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಗರದ ಗಂಗಾ ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿ ಮತ್ತು ಆತನ ತಾಯಿ ನಳಿನ ಅವರಿಗೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ ಚೆನ್ನಾಗಿ ಓದಿ ಉತ್ತಮ ಅಧಿಕಾರಿಯಾಗುವಂತೆ ವಿದ್ಯಾರ್ಥಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಾಯಿ ನಳಿನ ಅವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತೇಜಸ್ವಿನಿ, ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಇಡಗೂರು ಗ್ರಾಮ ಪಂಚಾಯತಿ ಪಿಡಿಓ ಕೆ.ಗುಣಶೀಲ, ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ ಹಾಜರಿದ್ದರು.
Comments are closed.