ತುಮಕೂರು: ಸರ್ವೋಚ್ಛ ನ್ಯಾಯಾಲಯದ ಪೀಠದ ತೀರ್ಪಿನಂತೆ ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಜಾರಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ವಿವಿಧ ಮಾದಿಗ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ತಿಂಗಳ 18ರಂದು ನಡೆಯುವ ಸಚಿವ ಸಂಪುಟ ಸಭೆ ಅಧಿವೇಶನದಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿ ಸಂಬಂಧ ತೀರ್ಮಾನ ಮಾಡಬೇಕು, ತಪ್ಪಿದಲ್ಲಿ ರಾಜ್ಯಾದ್ಯಂತ ಮುಖ್ಯಮಂತ್ರಿ, ಮಂತ್ರಿಗಳನ್ನು ಘೇರಾವ್ ಮಾಡಲಾಗುವುದು, ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಕಳೆದ ಆಗಸ್ಟ್ 1ರಂದು ಸವೋಚ್ಛ ನ್ಯಾಯಾಲಯದ ಏಳು ಸದಸ್ಯರ ಪೂರ್ಣ ಪೀಠವು ಎಸ್ ಸಿ, ಎಸ್ ಟಿ ಮೀಸಲಾತಿಯಲ್ಲಿ ಒಳಮೀಸಲಾತಿ ಉಪ ವರ್ಗೀಕರಿಸಲು ಆಯಾ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ತೀರ್ಪು ನೀಡಿದೆ, ಸುಪ್ರೀಂ ಕೋರ್ಟ್ ತೀರ್ಪನ್ನು ಅವಕಾಶ ವಂಚಿತ ನಾಡಿನ ಮಾದಿಗ ಸಮುದಾಯ ಸ್ವಾಗತಿಸಿದೆ, ಆದರೆ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.
ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಮಾತನಾಡಿ, ಬರುವ 18 ರಂದು ನಡೆಯುವ ವಿಧಾನ ಸಭಾ ಅಧಿವೇಶನದಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು, ನಿರ್ಲಕ್ಷ ಮಾಡಿದರೆ ಮಾದಿಗ ಸಮುದಾಯ ತೀವ್ರ ತರಹದ ಹೋರಾಟಕ್ಕಿಳಿಯುತ್ತದೆ, ಶಾಸಕರ ಮನೆ ಮುಂದೆ ಧರಣಿ ಮಾಡಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂದರು.
ಬಿಜೆಪಿ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಮಾತನಾಡಿ, ದತ್ತಾಂಶ ಲಭ್ಯವಿಲ್ಲ ಎಂಬ ಸಬೂಬನ್ನು ಒಡ್ಡಿ ಒಳಮೀಸಲಾತಿ ವರ್ಗೀಕರಣ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ, ಸರ್ಕಾರದ ಈ ಧೋರಣೆ ಸರಿಯಲ್ಲ, ಸರ್ಕಾರದ ಮುಂದಿರುವ ಅನೇಕ ವರದಿಗಳಲ್ಲಿ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯ ಹಾಗೂ ಸವಲತ್ತುಗಳಿಂದ ವಂಚಿತವಾಗಿರುವ ದತ್ತಾಂಶಗಳ ವಿವರಗಳು ಲಭ್ಯವಿರುತ್ತವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಒಳಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿ ಮಾಡದೆ ಸಮಿತಿ ಮಾಡುತ್ತೇವೆ, ಹೈಕಮಾಂಡ್ ಕೇಳಿ ತೀರ್ಮಾನ ಮಾಡುತ್ತೇವೆ ಎಂಬ ನೆಪ ಹೇಳುತ್ತಿದ್ದಾರೆ, ಜಾರಿ ಮಾಡದಂತೆ ತಡೆಯುವ ಹುನ್ನಾರ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಟೀಕಿಸಿದರು.
ಶಾಸಕ ಸುರೇಶ್ ಗೌಡ ಬೆಂಬಲ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಶಾಸಕ ಬಿ.ಸುರೇಶ್ ಗೌಡರು ಹೋರಾಟದಲ್ಲಿ ಭಾಗವಹಿಸಿ ಮಾದಿದ ಸಮುದಾಯದ ಹೋರಾಟ, ಬೇಡಿಕೆ ನ್ಯಾಯಯುತವಾಗಿದೆ, ಇದೇ ಕಾರಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಒಳಮೀಸಲಾತಿ ಜಾರಿಗೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು, ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದರೂ ಜಾರಿ ಮಾಡುವಲ್ಲಿ ನಿರ್ಲಕ್ಷ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಬಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹೆಚ್.ಎ.ಆಂಜನಪ್ಪ, ಗುಬ್ಬಿಯ ಜೆಡಿಎಸ್ ಮುಖಂಡ ನಾಗರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ್, ಮುಖಂಡರಾದ ಮಾರುತಿ ಗಂಗಹನುಮಯ್ಯ, ವೆಂಕಟೇಶ್, ಮರಿಚೆನ್ನಮ್ಮ, ನರಸೀಯಪ್ಪ, ಪಿ.ಎನ್.ರಾಮಯ್ಯ, ಹೊಸಕೋಟೆ ನಟರಾಜು, ಹನುಮಂತರಾಯಪ್ಪ ಇತರರು ಭಾಗವಹಿಸಿದ್ದರು.
Comments are closed.