ಇತಿಹಾಸ ಮರೆತವರಿಗೆ ಭವಿಷ್ಯ ಗೊತ್ತಿಲ್ಲ

3

Get real time updates directly on you device, subscribe now.


ತುಮಕೂರು: ಇತಿಹಾಸ ಮರೆತು ವರ್ತಮಾನ ಅರ್ಥ ಮಾಡಿಕೊಳ್ಳದವರು ಭವಿಷ್ಯ ಸೃಷ್ಟಿಸಲಾರರು, ಪರಂಪರೆಯ ಕ್ರಮಬದ್ಧ ಅಧ್ಯಯನವೇ ಇತಿಹಾಸ ಎಂದು ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತುಮಕೂರು ವಿವಿಯ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ಅಧ್ಯಯನ ವಿಭಾಗ ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಶ್ರೀಕೃಷ್ಣದೇವರಾಯರ 496ನೇ ಪುಣ್ಯಸ್ಮರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮಾನವ ಪ್ರೇಮ, ಭ್ರಾತೃತ್ವ ಕಲಿಯಲು, ಭವ್ಯವಾಗಿ ಬದುಕಲು, ಪ್ರಮಾದ ರಹಿತ ಬದುಕು ನಮ್ಮದಾಗಲು ಇತಿಹಾಸ ಅಧ್ಯಯನ ಅವಶ್ಯಕವಾಗಿದೆ, ವಿಜಯನಗರ ಸಾಮ್ರಾಜ್ಯಕ್ಕೆ ಮೆರುಗು, ವೈಭವ ತಂದುಕೊಟ್ಟ ಶ್ರೀಕೃಷ್ಣ ದೇವರಾಯ ಜನಾನುರಾಗಿ ಅರಸ ಎಂದು ತಿಳಿಸಿದರು.

ಶಾಸನ ಪಾಠ ಲೋಕಾರ್ಪಣೆಗೊಳಿಸಿದ ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಬಾಲಮುಕುಂದ ಪಾಂಡೆ ಮಾತನಾಡಿ, ಶಿಕ್ಷಣದ ಉದ್ದೇಶ ನೌಕರಿ ಹಿಡಿಯುವುದಾಗಿದೆ, ಸಾಹಿತ್ಯ- ಸಂಸ್ಕೃತಿ ತಿಳಿದುಕೊಳ್ಳುವ ಗೋಜಿಗೆ ವಿದ್ಯಾರ್ಥಿಗಳು ಹೋಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಇತಿಹಾಸವು ಜ್ಞಾನ ಆಧಾರಿತ ಶಿಕ್ಷಣ ಒಳಗೊಂಡಿತ್ತು, 21ನೇ ಶತಮಾನ ಉದ್ಯೋಗ ಆಧಾರಿತ ಶಿಕ್ಷಣ ನೀಡುವುದರಲ್ಲಿ ತಲ್ಲೀನವಾಗಿದೆ, ಸುಧಾರಿತ ಪಠ್ಯಕ್ರಮಗಳಿಂದ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತಿಲ್ಲ ಎಂದರು.

ಹಂಪಿ ಕನ್ನಡ ವಿವಿಯ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಪ್ರಾದೇಶಿಕ ಚರಿತ್ರೆಯೊಂದಿಗೆ ರಾಷ್ಟ್ರೀಯ ಚರಿತ್ರೆಯತ್ತ ನಾವೆಲ್ಲರೂ ಮುಖಮಾಡಬೇಕು, ಪೂರ್ವ ನಿರ್ಧಾರಿತ ಸಿದ್ಧಾಂತಗಳಿಂದ ಸಮಾಜಮುಖಿ ಅರಸರ ಚರಿತ್ರೆ ಮುನ್ನೆಲೆಗೆ ಬಂದಿಲ್ಲ ಎಂದು ತಿಳಿಸಿದರು.
ವಿಚಾರ ಸಂಕಿರಣದ ಸಂಯೋಜಕ ಪ್ರೊ.ಎಂ.ಕೊಟ್ರೇಶ್ ಮಾತನಾಡಿ, ವಿಜಯನಗರ ಸಾಮ್ರಾಜ್ಯವನ್ನು ವ್ಯಾಪಕವಾಗಿ ವಿಸ್ತರಿಸಿದ ಸಾಮ್ರಾಟ ಶ್ರೀಕೃಷ್ಣದೇವರಾಯ, ಶ್ರೀಕೃಷ್ಣದೇವರಾಯನ ಆಡಳಿತ ಭಾಷೆ ಕನ್ನಡವಾಗಿತ್ತು ಎಂದು ತಿಳಿಸಿದರು.

ಶ್ರೀಕೃಷ್ಣ ದೇವರಾಯರ ಕುರಿತು ವಿವಿಧ ಶೈಕ್ಷಣಿಕ ಗೋಷ್ಠಿಗಳು ನಡೆದವು, ದೇಶದ ವಿವಿಧ ಭಾಗದಿಂದ ಆಗಮಿಸಿದ್ದ, ಭಾರತೀಯ ಇತಿಹಾಸ ಸಂಕಲನ ಸಮಿತಿ ಉಪಾಧ್ಯಕ್ಷ ಕೆ.ಆರ್.ನರಸಿಂಹನ್, ಪ್ರಸಿದ್ಧ ಇತಿಹಾಸಕಾರ ಮತ್ತು ಖ್ಯಾತ ವಿದ್ವಾಂಸರಾದ ಡಾ.ವಸುಂಧರಾ ಫಿಲಿಯೋಜ, ಡಾ.ಕೆ.ಜಿ.ಗೋಪಾಲಕೃಷ್ಣ, ಡಾ.ಲಕ್ಷ್ಮೀಶ ಹೆಗಡೆ, ಡಾ.ಡಿ.ಎನ್.ಯೋಗೀಶ್ವರಪ್ಪ, ಶಾಸನ ಸಂಶೋಧಕ ಕೆ.ಧನಪಾಲ್, ಪ್ರೊ.ಎಲ್.ಪಿ.ರಾಜು, ಡಾ.ಚಿಕ್ಕಣ್ಣ, ಡಾ.ಪ್ರಿಯಾ ಠಾಕೂರ್, ಸಂಶೋಧನಾರ್ಥಿ ಶಶಿಕುಮಾರ ನಾಯ್ಕ ಕೆ.ಸಿ. ವಿಚಾರ ಮಂಡನೆ ಮಾಡಿದರು. ಹೊನ್ನೇನಹಳ್ಳಿಯ ಎಂ. ಪರಮೇಶ್ವರ್, ವಿಜಯ ಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!