ಕುಣಿಗಲ್: ತಾಲೂಕಿನ ಅಕ್ರಮ ಗಣಿಗಾರಿಕೆ ತಡೆಯಲು ಹೋದ ಮಾಹಿತಿ ಹಕ್ಕು ಬಳಕೆದಾರರ ಮೇಲೆ ತಹಶೀಲ್ದಾರ್ ಮುಂದೆಯೆ ಗಣಿ ಲಾಭಿಯವರು ಹಲ್ಲೆ ನಡೆಸಿರುವುದು ನೋಡಿದರೆ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂದು ಪ್ರಶ್ನಿಸಬೇಕಾಗುತ್ತದೆ ಎಂದು ಸಮಾನ ಮನಸ್ಕರ ವೇದಿಕೆಯ ಜಿ.ಕೆ.ನಾಗಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಕಸಬಾ, ಹುಲಿಯೂರು ದುರ್ಗ ಹೋಬಳಿಯ ವಿವಿಧ ಗ್ರಾಮದ ಸರ್ವೇ ನಂಬರ್ ಗಳಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ, ಕೆಲ ಗಣಿ ಮಾಲೀಕರು ಸರ್ಕಾರದ ನಿಯಮ ಉಲ್ಲಂಸಿ ಅನುಮತಿ ನೀಡಿದ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ ಪರಿಸರ ಸೇರಿದಂತೆ ಗ್ರಾಮ ವಾತಾವರಣಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಬಳಕೆದಾರ ಧನಂಜಯ ಎಂಬುವರು, ಅಗತ್ಯ ದಾಖಲೆ ಪಡೆದು ನಿಯಮ ಉಲ್ಲಂಘನೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರಕ್ಕೂ ಹೆಚ್ಚು ಗಣಿಗಾರಿಕೆ ನಿಲ್ಲಿಸಲಾಗಿದೆ, ಈ ಮಧ್ಯೆ ಸುರೇಶ್ ಎಂಬಾತನಿಗೆ ಸೇರಿದ ಕಲ್ಲು ಗಣಿಗಾರಿಕೆ ನಿಯಮ ಉಲ್ಲಂಸಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದು ತಹಶೀಲ್ದಾರ್ ನೇತೃತ್ವದಲ್ಲಿ ಜಂಟಿ ತನಿಖೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳು ಬುಧವಾರ ಆಗಮಿಸಿದ್ದ ಸಮಯದಲ್ಲಿ ಸುರೇಶ್ ಎಂಬಾತ ಇತರೆಯವರೊಂದಿಗೆ ಕೂಡಿಕೊಂಡು ತಹಶೀಲ್ದಾರ್ ಮುಂದೆಯೆ ಹಲ್ಲೆ ಮಾಡಿದ್ದಾರೆ, ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ತಹಶೀಲ್ದಾರ್ ಅರ್ಜಿದಾರನಿಗೆ ರಕ್ಷಣೆ ಕಲ್ಪಿಸುವಲ್ಲಿ ವಿಫಲವಾಗಿರುವುದು ನೋಡಿದರೆ ತಾಲೂಕಿನಲ್ಲಿ ಕಾನೂನು ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂದು ಪ್ರಶ್ನಿಸುವಂತಾಗಿದೆ, ಹೋರಾಟಗಾರರನ್ನು ತೋಳ್ಬಲದಿಂದ ಹತ್ತಿಕ್ಕುವ ಕ್ರಮ ನಿಜಕ್ಕೂ ಖಂಡನೀಯ ಎಂದರು.
ಮಾಹಿತಿ ಹಕ್ಕು ಬಳಕೆದಾರರ ಸಂಘದ ಅಮೃತಾ ಜಯರಾಂ ಮಾತನಾಡಿ, ಮಾರಾಣಾಂತಿಕ ಹಲ್ಲೆಗೊಳಗಾದ ಧನಂಜಯ ಅವರು ದೂರು ನೀಡಲು ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಸಕಾಲಿಕ ಕ್ರಮ ಕೈಗೊಳ್ಳದೆ ವಿನಾಕಾರಣ ಅಲೆದಾಡಿಸಿ ದೂರು ನೀಡಿದರೂ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಡುತ್ತದೆ, ಪೊಲಿಸರು ಸಾಮಾಜಿಕ ನ್ಯಾಯ ಪಾಲನೆ ಮಾಡಬೇಕಿದೆ ಎಂದರು.
ಕನ್ನಡ ಕಲಿಗಳ ವೇದಿಕೆ ರಾಜ್ಯಾಧ್ಯಕ್ಷ ಪ್ರಕಾಶ, ಬಾದಿತ ವ್ಯಕ್ತಿ ಧನಂಜಯ ಇತರರು ಇದ್ದರು.
Comments are closed.