ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ 11,447 ಕೋಟಿ ಮೀಸಲು

ವಾಲ್ಮೀಕಿ ಜಯಂತಿಯಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

3

Get real time updates directly on you device, subscribe now.


ತುಮಕೂರು: ಸರ್ಕಾರ ತನ್ನ ಆಯವ್ಯಯದಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ 11,447 ಕೋಟಿ ರೂ. ಮೀಸಲಿಟ್ಟಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾ ನಗರ ಪಾಲಿಕೆ ಸಹಯೋಗದಲ್ಲಿ ನಗರದ ಬಾಲ ಭವನ ಸಭಾಂಗಣದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆ ರೂಪಿಸಿದ್ದು, ಜಾತಿ ಗಣತಿ ಆಧಾರದ ಮೇಲೆ ಶೇಕಡಾ 3ರಷ್ಟಿದ್ದ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಲಾಗಿದೆ, ಉದ್ಯೋಗ ಮತ್ತು ಶಿಕ್ಷಣಕ್ಕೆ ಮಾತ್ರ ಈ ಮೀಸಲಾತಿ ಅನ್ವಯವಾಗಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಎಂಬ ಮಹಾ ಗ್ರಂಥ ರಚಿಸುವ ಮೂಲಕ ಆದಿ ಕವಿ ಮತ್ತು ಮಹಾ ಋಷಿ ಎನಿಸಿಕೊಂಡಿದ್ದಾರೆ, ಅವರ ತತ್ವಾದರ್ಶ ಪಾಲಿಸಿಸುವ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂದು ತಿಳಿಸಿದರು.
ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಸಮಾಜದಲ್ಲಿನ ದ್ವೇಷ, ಅಸೂಯೆ, ಕರುಣೆ, ಪ್ರೀತಿಯ ಪಾತ್ರಗಳನ್ನು ರಾಮಾಯಣದಲ್ಲಿ ತೋರಿಸುವ ಮೂಲಕ ಜೀವನದ ಪ್ರತಿ ಹಂತವನ್ನು ಮಹರ್ಷಿ ವಾಲ್ಮೀಕಿಯವರು ವಿಸ್ತತವಾಗಿ ತಿಳಿಸಿದ್ದಾರೆ, ಇಂಥಹ ಆದರ್ಶಪ್ರಾಯ ವ್ಯಕ್ತಿಗಳನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ ಅವರು ತಿಳಿಸಿದ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮತ್ತು ಜಿಲ್ಲಾ ನಾಯಕ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಲಾ ರಾಜಣ್ಣ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮನುಷ್ಯ ಜೀವನದ ಪರಿಕಲ್ಪನೆ ತಿಳಿಸಿದ್ದು, ಜೀವನ ರೂಪಿಸಿಕೊಳ್ಳಲು ರಾಮಾಯಣ ಒಳ್ಳೆಯ ನಿದರ್ಶನವಾಗಿದೆ, ಹಿಂದುಳಿದ ಸಮುದಾಯಗಳ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು, ಅಧಿಕಾರಿಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ 2023- 24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎನ್.ಎಸ್.ಧನುಷ್, ವೈ.ಕಾವ್ಯ, ಕೆ.ಎಸ್. ಚರಣ್ ರಾಜ್, ಸಾನ್ವಿ, ಬಿಂದು, ಡಿ.ಎ.ಪುನೀತ್, ಓ. ಭಾರ್ಗವಿ, ಸಿ.ಎಲ್. ಚೇತನ, ಭಾನುಪ್ರಕಾಶ್, ಪುಷ್ಪಲತಾ, ಎಂ.ಸೃಷ್ಟಿ, ದೀಪ್ತಿಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಕೃಷ್ಣಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ಪಾಲಿಕೆ ಮಾಜಿ ಮಹಾಪೌರ ಬಿ.ಜಿ.ಕೃಷ್ಣಪ್ಪ, ಚಂದ್ರಶೇಖರ ಗೌಡ, ವಾಲ್ಮೀಕಿ ವಿದ್ಯಾವರ್ಧಕ ಸಂಘ ಅಧ್ಯಕ್ಷ ಹೆಚ್.ಜಿ.ಪುರುಷೋತ್ತಮ, ಜಿಲ್ಲಾ ನಾಯಕ ಸಮುದಾಯದ ಮುಖಂಡರಾದ ವಿಜಯ ಕುಮಾರ, ಕೆಂಪಹನುಮಯ್ಯ, ಕೃಷ್ಣಮೂರ್ತಿ, ಸಿ.ದಾಸಪ್ಪ, ಮಹದೇವಯ್ಯ, ಶ್ರೀರಾಮಚಂದ್ರ ನಾಯಕ, ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಲಕ್ಷ್ಮಿ ನಾರಾಯಣ, ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿ, ಸಮುದಾಯದ ಮುಖಂಡರು, ವಿವಿಧ ಸಂಘಟನೆ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!