ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಭೀಕರ ಮಳೆಯಿಂದ ಭಾರಿ ಹಾನಿಯಾಗಿದ್ದು ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಎಲ್ಲಾ ಕೆಲಸ ಬಿಟ್ಟು ಸಂತ್ರಸ್ತ ಹಳ್ಳಿಗಳಿಗೆ ಭೇಟಿ ಕೊಡಬೇಕು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ ಗೌಡ ಆಗ್ರಹಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ಮತ್ತು ಮಲಸಂದ್ರ ಪಾಳ್ಯದಲ್ಲಿ ಗುರುವಾರ ಮತ್ತು ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಯಿಂದ ಕುಸಿದ ಮನೆಗಳಿಗೆ ಅವರು ಭೇಟಿ ನೀಡಿ, ಈ ಎರಡೂ ಕಡೆಗಳಲ್ಲಿ 43 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ, ಅದರಲ್ಲಿ ಐದು ಮನೆಗಳು ಪೂರ್ಣವಾಗಿ ಬಿದ್ದಿವೆ, 21 ಮನೆಗಳಿಗೆ ಭಾಗಶಃ ಹಾನಿಯಾಗಿದೆ, ಇಷ್ಟು ಅನಾಹುತ ಆದರೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡದೆ ತಾತ್ಸಾರ ಮನೋಭಾವ ಹೊಂದಿರುವುದನ್ನು ಶಾಸಕ ಬಿ.ಸುರೇಶ್ ಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಕ್ಷಣ ಮಳೆ ಹಾನಿಗೀಡಾದ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಶಂಕರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಿವರಾಜ್, ಕೊಟ್ಟನಳ್ಳಿಯ ರಾಜಶೇಖರ, ಬಿಜೆಪಿ ಮುಖಂಡರಾದ ಸ್ವಾಮಿ, ಕೊತ್ತಿಹಳ್ಳಿಯ ರಾಜಣ್ಣ ಗಿರೀಶ್, ಚಂದ್ರಮ್ಮ ಇತರರು ಇದ್ದರು.
Comments are closed.